ಅತಂತ್ರ ಅಸೆಂಬ್ಲಿ ಸೃಷ್ಟಿಯಾದರೆ ಅನ್ಯರಿಗೆ ಬೆಂಬಲ

First Published May 8, 2018, 8:47 AM IST
Highlights

 ಒಂದು ವೇಳೆ ಮಾಧ್ಯಮಗಳ ಸಮೀಕ್ಷೆಯಂತೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಪಕ್ಷದ ಯೋಜನೆಗಳನ್ನು ಅನುಷ್ಠಾನಗೊಳಿಸುವವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 
 

ಬೆಂಗಳೂರು :  ಒಂದು ವೇಳೆ ಮಾಧ್ಯಮಗಳ ಸಮೀಕ್ಷೆಯಂತೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಪಕ್ಷದ ಯೋಜನೆಗಳನ್ನು ಅನುಷ್ಠಾನಗೊಳಿಸುವವರಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 

ಸೋಮವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದುಕೊಳ್ಳುವ ವಿಶ್ವಾಸ ಈಗಲೂ ಇದೆ. ಆದರೆ, ಮಾಧ್ಯಮಗಳು ತಮ್ಮದೇ ಸಮೀಕ್ಷೆ ನಡೆಸಿ ಊಹಾಪೋಹದ ಅಂಕಿ ಸಂಖ್ಯೆಗಳನ್ನು ಕೊಟ್ಟುಕೊಂಡಿವೆ ಎಂದರು. 

ರಾಜ್ಯದ ಜನರಿಗೆ ಜೆಡಿಎಸ್ ಪರ ಒಲವಿದೆ. ಆದರೆ, ಮಾಧ್ಯಮಗಳು ಬಿಜೆಪಿ, ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ನೀಡುತ್ತಿವೆ. ಮಾಧ್ಯಮಗಳ ಸಮೀಕ್ಷೆಯಂತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಮುಖ್ಯಮಂತ್ರಿ ಪಟ್ಟಕ್ಕಾಗಿಯಾವ ಪಕ್ಷದ ಬಾಗಿಲೂ ತಟ್ಟುವುದಿಲ್ಲ. ಜೆಡಿಎಸ್ ಪಕ್ಷದ ನಿಲುವು, ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗುವವರಿಗೆ
ಬೆಂಬಲ ನೀಡುತ್ತೇವೆ ಎಂದು ಹೇಳಿದರು. 

ಜೆಡಿಎಸ್ ರಾಜ್ಯದ ಆರು ಕೋಟಿ ಜನರ ಪರವಾಗಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ ಎಂದು ಈಗಾಗಲೇ ಹೇಳಲಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಅವಕಾಶವಾದಿಗಳು.

ಭ್ರಷ್ಟಾಚಾರಿಗಳನ್ನು ರಕ್ಷಿಸಲು ಲೋಕಾಯುಕ್ತ ಸಂಸ್ಥೆಯನ್ನು ಬಲಹೀನ ಮಾಡಿವೆ. ಕೆಲ ಹೋರಾಟಗಾರರು ಮತ್ತು ಸಾಹಿತಿಗಳು ಬಿಜೆಪಿ ಜತೆ ಕೈ ಜೋಡಿಸಬಾರದು, ಕಾಂಗ್ರೆಸ್ ಜತೆ ಇರ ಬೇಕು ಎಂಬ  ಭಜನೆ ಮಾಡುತ್ತಿದ್ದಾರೆ. ಎರಡೂ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರು. ರಾಷ್ಟ್ರೀಯ ಪಕ್ಷಗಳು ಪರ್ಸೆಂಟ್ ಸರ್ಕಾರ ಎಂದು ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿವೆ. ಸರ್ಕಾರದ ಆದೇಶ, ಟೆಂಡರ್‌ನಲ್ಲಿ ಪರ್ಸೆಂಟ್ ವ್ಯವಸ್ಥೆ ಮಾಡಿದ್ದೇ ಬಿಜೆಪಿ ಎಂದು ಎಚ್‌ಡಿಕೆ ಆರೋಪಿಸಿದರು.

click me!