
ಬೆಂಗಳೂರು : ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ನನ್ನದು ಯಾವುದೇ ಪಾತ್ರ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಕೆಲವು ಮಾಧ್ಯಮಗಳು ಮೈತ್ರಿ ಸರ್ಕಾರದಲ್ಲಿ ದೇವೇಗೌಡ ಪಾತ್ರದ ಕುರಿತು ವರದಿ ಮಾಡಿವೆ. ಇದು ಬೇಸರದ ವಿಷಯ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಮಂಗಳವಾರ ಪ್ರಕಟಣೆ ನೀಡಿರುವ ಅವರು, ಸಮ್ಮಿಶ್ರ ಸರ್ಕಾರದ ರಚನೆಯ ಬಗ್ಗೆ ಕೆಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿದ್ದು, ಅವುಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೈತ್ರಿ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆಯಾಗಲಿ, ಸಚಿವ ಸಂಪುಟದ ರಚನೆಯಲ್ಲಾಗಲಿ, ಸಮನ್ವಯ ಸಮಿತಿ ರಚನೆಯಲ್ಲಾಗಲಿ ಅಥವಾ ಸರ್ಕಾರದ ಆಡಳಿತದ ವಿಚಾರದಲ್ಲಾಗಲಿ ಭಾಗಿಯಾಗುವುದಿಲ್ಲ ಹಾಗೂ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಕಾಂಗ್ರೆಸ್ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನನ್ನ ವಿರೋಧ ಇದೆ’ ಎಂದು ಕುಚೋದ್ಯ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಲಾಗಿದೆ.
ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ. ಸಂಪುಟ ರಚನೆ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಕೆಲವು ಮುಖಂಡರು ಮತ್ತು ಕಾಂಗ್ರೆಸ್ ಮುಖಂಡರು ಸೇರಿ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.