ಲಾಸ್ಟ್ ಡೇ - ಲಾಸ್ಟ್ ಶೋ : ಬಹಿರಂಗ ಪ್ರಚಾರ ಅಂತ್ಯ

First Published May 10, 2018, 7:14 AM IST
Highlights

ಇನ್ನು ಎರಡು ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಇದರೊಂದಿಗೆ ಗದ್ದಲದ  ರ್ಯಾಲಿಗಳು, ರೋಡ್‌ಶೋಗಳು, ಅಬ್ಬರದ ಪ್ರಚಾರಗಳು, ಬಹಿರಂಗ ಬೈದಾಟಗಳು ಇಂದು ಸಂಜೆಯ ಹೊತ್ತಿಗೆ ಮುಕ್ತಾಯವಾಗಿ ಸದ್ದಿಲ್ಲದ ಎರಡು ದಿನದ ಮನೆ ಮನೆ ಪ್ರಚಾರ ಆರಂಭವಾಗಲಿದೆ. 

ಬೆಂಗಳೂರು :  ಇನ್ನು ಎರಡು ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಇದರೊಂದಿಗೆ ಗದ್ದಲದ  ರ್ಯಾಲಿಗಳು, ರೋಡ್‌ಶೋಗಳು, ಅಬ್ಬರದ ಪ್ರಚಾರಗಳು, ಬಹಿರಂಗ ಬೈದಾಟಗಳು ಇಂದು ಸಂಜೆಯ ಹೊತ್ತಿಗೆ ಮುಕ್ತಾಯವಾಗಿ ಸದ್ದಿಲ್ಲದ ಎರಡು ದಿನದ ಮನೆ ಮನೆ ಪ್ರಚಾರ ಆರಂಭವಾಗಲಿದೆ. 

ಇದರೊಂದಿಗೆ, ಕರ್ನಾಟಕಕ್ಕೆ ಆಗಮಿಸಿದ್ದ ವಿವಿಧ ರಾಜ್ಯಗಳ ಘಟಾನುಘಟಿ ನಾಯಕರು ಕರ್ನಾಟಕ ಬಿಟ್ಟು ಹೊರಹೋಗಬೇಕಾಗುತ್ತದೆ. ಕರ್ನಾಟಕದ ವಿವಿಧ ನಾಯಕರೂ ತಮ್ಮದಲ್ಲದ ಕ್ಷೇತ್ರಗಳಿಂದ ಕಾಲುಕಿತ್ತು ತಮ್ಮ ತಮ್ಮ ಕ್ಷೇತ್ರಗಳಿಗೆ ಮರಳಬೇಕಾಗುತ್ತದೆ.


ದೆಹಲಿಗೆ ಹಿಂತಿರುಗಿದ ಸುಂಟರಗಾಳಿ ಮೋದಿ : ಚುನಾವಣೆಯ ಕೊನೆಯ ಹಂತದ ಪ್ರಚಾರಕ್ಕಾಗಿ ಕಾಯ್ದಿಟ್ಟುಕೊಂಡಿದ್ದ ಮೋದಿ ಅಸ್ತ್ರವನ್ನು ಬಿಜೆಪಿ ಯಶಸ್ವಿಯಾಗಿ ಪ್ರಯೋಗಿದೆ. ಕಳೆದ ೯ ದಿನಗಳಲ್ಲಿ ೨೧ ಮೆಗಾ ರ‌್ಯಾಲಿಗಳನ್ನು ನಡೆಸಿದ ಪ್ರಧಾನಿ ಮೋದಿ ನಿನ್ನೆ ರಾತ್ರಿ ಬೀದರ್‌ನಲ್ಲಿ ಈ ಚುನಾವಣೆಯ ಕಟ್ಟ ಕಡೆಯ ಪ್ರಚಾರ ಭಾಷಣ ಮಾಡಿ ದೆಹಲಿಗೆ ಹಿಂತಿರುಗಿದ್ದಾರೆ. ಮೋದಿಯವರ ಬಿರುಗಾಳಿಯಂಥ ಈ ಸಭೆಗಳಲ್ಲಿ ಕಾಂಗ್ರೆಸ್, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ಮೇಲೆ ಈವರೆಗಿನ ಸಭೆಗಳಿಗಿಂತ ಅತ್ಯಂತ ಪ್ರಖರವಾದ ವಾಗ್ದಾಳಿಯನ್ನು ಮಾಡಿದ್ದು ವಿಶೇಷವಾಗಿತ್ತು.


ರಾಹುಲ್ ಪ್ರಚಾರ ಒಂದು ದಿನ ವಿಸ್ತಾರ : ಪ್ರಧಾನಿ ಮೋದಿಯವರಿಗಿಂತ ಮೊದಲೇ ಕರ್ನಾಟಕದಲ್ಲಿ ಮೆಗಾ ಸಭೆಗಳ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕೊನೆಯ ಹಂತದ ಪ್ರಚಾರದಲ್ಲಿ ಮೆಗಾ ರ‌್ಯಾಲಿಗಳಿಗಿಂತ ಚಿಕ್ಕ ಚಿಕ್ಕ ಸಂವಾದ ಸಭೆಗಳು, ರೋಡ್ ಶೋಗಳು, ದೇವಾಲಯ, ಚರ್ಚ್, ಮಸೀದಿ ಭೇಟಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ನಿಗದಿಯಂತೆ ನಿನ್ನೆಯೇ ಅವರ ಕೊನೆಯ  ಪ್ರಚಾರ ಸಭೆಯಾಗಬೇಕಿತ್ತು ಆದರೆ, ಅವರು ಒಂದು ದಿನ ವಿಸ್ತರಿಸಿ ಇಂದು ಹುಬ್ಬಳ್ಳಿಯಲ್ಲಿ ಪ್ರಚಾರ ಕಾರ್ಯ ನಡೆಸಲಿ ರಾತ್ರಿ ನವದೆಹಲಿಗೆ ಹಿಂತಿರುಗಲಿದ್ದಾರೆ. 

ನಿಗದಿಯಂತೆ ಸಂಜೆ ತನಕವೂ ಶಾ ಶೋ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೆಗಾ ರ‌್ಯಾಲಿಗಿಂತ ಹೆಚ್ಚಾಗಿ ರೋಡ್ ಶೋಗಳನ್ನು ನಡೆಸುವುದರ ಜೊತೆಗೆ ಎಲ್ಲಾ ಪ್ರಮುಖ ಕೇಂದ್ರ ಗಳಲ್ಲೂ ಕಾರ್ಯಕರ್ತರ ಸಭೆಯನ್ನು ನಡೆಸಿ ದರು. ಈ ಮೂಲಕ ಮತಗಟ್ಟೆಗೆ ಹೆಚ್ಚೆಚ್ಚು ಮತದಾರರನ್ನು ಕರೆ ತಂದು ಹೆಚ್ಚೆಚ್ಚು ಮತದಾನ ಮಾಡಿಸುವ ಕುರಿತು ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಇದು ಸಾರ್ವಜನಿಕ ಸಭೆಗಳಿಗಿಂತ ಹೆಚ್ಚು ವೈಯಕ್ತಿಕ ರೀತಿಯ ಪ್ರಚಾರ ಕ್ರಮವಾಗಿದ್ದು ಮತದಾರರಿಗೆ ಹೆಚ್ಚು ಆತ್ಮೀಯವೂ ಪ್ರಭಾವಶಾಲಿಯೂ ಆದ ತಂತ್ರವಾಗಿದೆ. ಈ ಪರಿಯ ತಂತ್ರ ಕರ್ನಾಟಕಕ್ಕೆ ಹೊಸತು.

click me!