
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ದೊರಕಿದ ಬಳಿಕ ನಡೆದ ಘಟನಾವಳಿಗಳು ಇಡೀ ದೇಶದ ಗಮನ ಸೆಳೆದಿದ್ದವು. ಪ್ರತಿಯೊಂದು ಘಟನಾವಳಿಗಳೂ ರೋಚಕ ಪತ್ತೇದಾರಿ ಸಿನೆಮಾದಂತೆ ನಡೆದವು. ಕಾಂಗ್ರೆಸ್- ಜೆಡಿಎಸ್ಪಾಳಯದ 117 ಕ್ಕೂ ಹೆಚ್ಚು ಶಾಸಕರನ್ನು 2 ದಿನ ಹದ್ದಿನಗಣ್ಣಿನಿಂದ ಕಾಪಾಡಿ, ಅವರು ಬಿಜೆಪಿ ಪಾಳಯಕ್ಕೆ ಹೋಗದಂತೆ ತಡೆದ ಖ್ಯಾತಿ ಹಿರಿಯ ಕಾಂಗ್ರೆಸ್ಸಿಗ ಡಿ.ಕೆ. ಶಿವಕುಮಾರ್ ಅವರದ್ದು.
ರಾಜ್ಯದ ಅಧಿಕಾರ ಬಿಜೆಪಿ ತೆಕ್ಕೆಗೆ ಹೋಗದಂತೆ ತಡೆದು, ಮತ್ತೆ ಕಾಂಗ್ರೆಸ್ ಅನ್ನು ಮೈತ್ರಿಕೂಟದ ಪಾಲುದಾರನಾಗುವ ಮೂಲಕ ಅಧಿಕಾರಕ್ಕೆ ತರುವಲ್ಲಿ ನಡೆದ ಮೂರು ದಿನಗಳ ಹೈಡ್ರಾಮಾ ಕುರಿತು ಡಿ.ಕೆ. ಶಿವಕುಮಾರ್ ಅವರು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗೆ ವಿಸ್ತೃತ ಸಂದರ್ಶನ ನೀಡಿದ್ದಾರೆ. ಅವರು ಹೇಳಿದ್ದಿಷ್ಟು: ಮೇ 15ರಂದು ಮತ ಎಣಿಕೆ ನಡೆಯುತ್ತಿದ್ದಂತೆ ನಮ್ಮ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು, ಹೀಗಾಗಿ ಜೆಡಿಎಸ್‌ಗೆ ಬೇಷರತ್ತು ಬೆಂಬಲ ನೀಡಲು ಪಕ್ಷ ನಿರ್ಧರಿಸಿತು. ಮತ್ತೊಂದೆಡೆ ಬಹುಮತವಿಲ್ಲದಿದ್ದುದರಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿ ಹಣದ ಆಮಿಷ ಒಡ್ಡ ಲಾರಂಭಿಸಿತ್ತು. 5 ಕೋಟಿ ರು.ನಿಂದ 150 ಕೋಟಿ ರು. ವರೆಗೂ ಆಮಿಷ ಒಡ್ಡಲಾಯ್ತು. ಈ ವೇಳೆ ಬಿಜೆಪಿ ನಾಯಕರ ಈ ಕುರಿತ ಮಾತುಕತೆಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕರಿಗೆ ನಿರ್ದೇಶಿಸಿದೆವು.
ಇದರ ಹೊರತಾಗಿಯೂ ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿಸಲಿದ್ದಾರೆ ಎಂದು ಅರಿವಿಗೆ ಬಂದ ತಕ್ಷಣ, ಅವರನ್ನೆಲ್ಲ ಬೆಂಗಳೂರಿಗೆ ಬರುವಂತೆ ತಿಳಿಸಲಾಯಿತು. ಅಲ್ಲಿ, ನಾವೆಲ್ಲರೂ ಜೊತೆಯಾಗಿದ್ದರೆ, ನಮ್ಮ ಪಕ್ಷಗಳಿಗೆ ಬಹುಮತವಿದೆ ಮತ್ತು ನಾವೇ ಸರ್ಕಾರ ರಚಿಸಬಹುದು. ಇಲ್ಲವಾದಲ್ಲಿ ಎಲ್ಲರೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದು ನಿಮಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ ಎಂದು ನೂತನ ಶಾಸಕರಿಗೆ ಮನವರಿಕೆ ಮಾಡಿದೆವು. ಅಲ್ಲದೆ, ಈ ಸಂದರ್ಭ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ನಿರ್ದೇಶಿಸಿದೆವು.
ವಾಸ್ತವವಾಗಿ ನಾವು ನಾವು ಕೇರಳಕ್ಕೆ ಹೋಗುವುದರ ಲ್ಲಿದ್ದೆವು. ನಮಗೆ ಕನಿಷ್ಠ 100 ಕೋಣೆಗಳು ಬೇಕಾಗಿದ್ದವು. ಆದರೆ ಅಲ್ಲಿ ಅಷ್ಟೊಂದು ಕೋಣೆಗಳಿರಲಿಲ್ಲ. ಕೊನೆಗೆ, ತೆಲಂಗಾಣ ಕಾಂಗ್ರೆಸ್ ಸಮಿತಿಯು ಹೈದರಾಬಾದ್‌ನಲ್ಲಿ ಹೋಟೆಲ್‌ಗಳಿರುವುದನ್ನು ತಿಳಿಸಿತು. ಅಲ್ಲಿ ಕಾಂಗ್ರೆಸ್ ನಾಯಕ ಟಿ. ಸುಬ್ಬಾರಾಮಿ ರೆಡ್ಡಿ ಮಾಲಕತ್ವದ ಪಾರ್ಕ್ ಹಯಾತ್ ಹೋಟೆಲ್‌ಗೆ ತೆರಳಲಾಯಿತು.
"