ಸರ್ಕಾರ ರಚನೆಗೂ ಮುನ್ನ ಶುರುವಾಗಿದೆ ಸಂಪುಟ ರಚನೆ ಸಂಕಟ

First Published May 21, 2018, 7:29 AM IST
Highlights

ಸಮ್ಮಿಶ್ರ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳೆಯ ಇದೀಗ ಅಕ್ಷರಶಃ ಕಲ್ಲು ಬಿದ್ದ ಜೇನುಗೂಡಾಗಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಡಿಸಿಎಂ ಪದವಿ ಗಿಟ್ಟಿಸಲು ಭರ್ಜರಿ ಲಾಬಿ ಆರಂಭವಾಗಿದೆ. ಅದರಲ್ಲೂ ಉಪ
ಮುಖ್ಯಮಂತ್ರಿ (ಡಿಸಿಎಂ) ಹುದ್ದೆಗೆ 5 ಪ್ರಭಾವಿ ನಾಯಕರು ಪೈಪೋಟಿ ಆರಂಭಿಸಿದ್ದಾರೆ. ಪರಿಣಾಮ - ಒಂದಕ್ಕಿಂತ ಹೆಚ್ಚು ಡಿಸಿಎಂ ಪದವಿ ಸೃಷ್ಟಿಯಾಗುವುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಬೆಂಗಳೂರು (ಮೇ. 21): ಸಮ್ಮಿಶ್ರ ಸರ್ಕಾರ ರಚನೆ ಖಾತ್ರಿಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳೆಯ ಇದೀಗ ಅಕ್ಷರಶಃ ಕಲ್ಲು ಬಿದ್ದ ಜೇನುಗೂಡಾಗಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಹಾಗೂ ಡಿಸಿಎಂ ಪದವಿ ಗಿಟ್ಟಿಸಲು ಭರ್ಜರಿ ಲಾಬಿ ಆರಂಭವಾಗಿದೆ. ಅದರಲ್ಲೂ ಉಪ ಮುಖ್ಯಮಂತ್ರಿ (ಡಿಸಿಎಂ) ಹುದ್ದೆಗೆ 5 ಪ್ರಭಾವಿ ನಾಯಕರು ಪೈಪೋಟಿ ಆರಂಭಿಸಿದ್ದಾರೆ. ಪರಿಣಾಮ - ಒಂದಕ್ಕಿಂತ ಹೆಚ್ಚು ಡಿಸಿಎಂ ಪದವಿ ಸೃಷ್ಟಿಯಾಗುವುದೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾತು ಕತೆಯ ಪ್ರಾರಂಭದ ಹಂತದಲ್ಲೇ ಕುಮಾರ ಸ್ವಾಮಿ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ಸಿ ನಿಂದ ದಲಿತರೊಬ್ಬರನ್ನು ಡಿಸಿಎಂ ಮಾಡ ಬೇಕು ಎಂಬುದು ನಿರ್ಧಾರವಾಗಿತ್ತು. ಆದರೆ, ಇದೀಗ ಈ ಪದವಿಗೆ ಲಿಂಗಾ ಯತ-ವೀರಶೈವರು ಪ್ರಬಲ ಲಾಬಿ ಆರಂಭಿಸಿದ್ದಾರೆ. 

ಇದಕ್ಕೆ ಸಂವಾದಿಯಾಗಿ ಒಕ್ಕಲಿಗರೂ ಪೈಪೋಟಿ ಶುರುವಿಟ್ಟುಕೊಂಡಿದ್ದಾರೆ. ಲಿಂಗಾಯತ-ವೀರಶೈವರ ಪೈಕಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪರ ಬಹಿರಂಗ ಲಾಬಿ ಆರಂಭವಾಗಿದೆ. ಇನ್ನು ಮತ್ತೊಬ್ಬ ಹಿರಿಯ ಶಾಸಕರಾದ ಎಂ.ಬಿ.ಪಾಟೀಲ್ ಅವರು ಪಕ್ಷದೊಳಗಿನ ತಮ್ಮ ಸಂಪರ್ಕಗಳ ಮೂಲಕ ಈ ಹುದ್ದೆಗಾಗಿ ಲಾಬಿ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಿಂಗಾಯತ-ವೀರಶೈವರಲ್ಲಿ ಆರಂಭಗೊಂಡಿರುವ ಈ ಲಾಬಿಯ ಪ್ರಭಾವ ಒಕ್ಕಲಿಗರ ಮೇಲೂ ಬಿದ್ದಿದ್ದು, ಸರ್ಕಾರದ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಡಿಸಿಎಂ ಮಾಡಬೇಕು ಎಂದ ಒಕ್ಕಲಿಗ ಮುಖಂಡರು ಲಾಬಿ ಆರಂಭಿಸಿದ್ದಾರೆ. ಇದೆಲ್ಲದರ ನಡುವೆ, ಜನತಾಪರಿವಾರದಿಂದ ಬಂದಿರುವ ಕಾಂಗ್ರೆಸ್‌ನ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ಸಹ ಡಿಸಿಎಂ ಹುದ್ದೆಯ ಪೈಪೋಟಿಯಲ್ಲಿದ್ದಾರೆ ಎನ್ನಲಾಗಿದ್ದು, ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಶಪಾಂಡೆ ಅವರು ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಮೇಲೆ ಈ ಪ್ರಮುಖ ಹುದ್ದೆಗೆ ಲಾಬಿ ನಡೆಸುತ್ತಿರುವುದು ಮಾತ್ರವಲ್ಲದೆ, ದೇವೇಗೌಡರ ಬಳಿಯೂ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗೆ ಡಿಸಿಎಂ ಹುದ್ದೆಗೆ ಪರಮೇಶ್ವರ್, ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ ಲಾಬಿಗೆ ಮುಂದಾಗಿರುವುದು ಕಾಂಗ್ರೆಸ್‌ಗೆ ತಲೆನೋವು ಉಂಟುಮಾಡಿದೆ. ವಾಸ್ತವವಾಗಿ ಆರಂಭಿಕ ಚರ್ಚೆ ವೇಳೆ ಸರ್ಕಾರ ರಚನೆಗೆ ಜೆಡಿಎಸ್‌ಗೆ ಬಾಹ್ಯ ಬೆಂಬಲ ನೀಡುವ ಉದ್ದೇಶ ಕಾಂಗ್ರೆಸ್‌ಗೆ ಇತ್ತು. ಆದರೆ, ಇದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒಪ್ಪಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಭಾಗವಾಗಿರಬೇಕು ಮತ್ತು ದಲಿತರೊಬ್ಬರಿಗೆ ಕಾಂಗ್ರೆಸ್‌ನಿಂದ ಡಿಸಿಎಂ ಪದವಿ ನೀಡಬೇಕು ಎಂಬ ಸಲಹೆ ರೂಪದ ಷರತ್ತನ್ನು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‌ನ ಮುಂದಿಟ್ಟಿದ್ದರು.

ಇದಕ್ಕೆ ಕಾಂಗ್ರೆಸ್ ಒಪ್ಪಿದ್ದರಿಂದ ದಲಿತರು ಡಿಸಿಎಂ ಆಗಲಿದ್ದಾರೆ ಎಂಬುದು ಖಚಿತವಾಗಿದ್ದು, ಆ ಪದವಿಯನ್ನು ಅಯಾಚಿತವಾಗಿ ಪರಮೇಶ್ವರ್ ಅವರಿಗೆ ನೀಡಲು ಎಲ್ಲಾ ತೀರ್ಮಾನವಾಗಿತ್ತು. ಆದರೆ, ಯಡಿಯೂರಪ್ಪ ವಿಶ್ವಾಸ ಮತ ಪಡೆಯುವಲ್ಲಿ ವಿಫಲರಾದ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ಲಿಂಗಾಯತ-ವೀರಶೈವರಿಗೆ  ಅನ್ಯಾಯವಾಗಿದೆ ಎಂಬ ಸಂದೇಶ ರವಾನೆಯಾಗುತ್ತಿದೆ. ಇಂತಹ ಸಂದೇಶ ಆ ಸಮುದಾಯಕ್ಕೆ ಹೋಗದಂತೆ ತಡೆಯಲು ಲಿಂಗಾಯತರೊಬ್ಬರಿಗೆ ಡಿಸಿಎಂ ಪದವಿ ನೀಡಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿದೆ.

click me!