ಕರ್ನಾಟಕದಲ್ಲಿ ಬಿಜೆಪಿಗೆ 135 ಸ್ಥಾನ [ವೈರಲ್ ಚೆಕ್]

First Published May 8, 2018, 12:45 PM IST
Highlights

ಕರ್ನಾಟಕ ವಿಧಾನಸಭಾ ಚುನಾವಣಾ ಚುನಾವಣೆಗೆ ಸಂಬಂಧಪಟ್ಟಂತೆ ಚುನಾವಣಾ ಪೂರ್ವ ಸಮೀಕ್ಷೆಗಳ ಅಬ್ಬರ ಅಧಿಕವಾಗುತ್ತಿದೆ. ಈ ನಡುವೆ ಕರ್ನಾಟಕದ ರಾಜಕೀಯ ಭವಿಷ್ಯದ ಕುರಿತಾದ ಸುಳ್ಳು ಸಮೀಕ್ಷೆಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಅದರಂತೆ ಇಲ್ಲೊಂದು ಸಮೀಕ್ಷೆ ಹೇಳುತ್ತಿರುವುದೇನು ಗೊತ್ತೇ..?

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಚುನಾವಣೆಗೆ ಸಂಬಂಧಪಟ್ಟಂತೆ ಚುನಾವಣಾ ಪೂರ್ವ ಸಮೀಕ್ಷೆಗಳ ಅಬ್ಬರ ಅಧಿಕವಾಗುತ್ತಿದೆ. ಈ ನಡುವೆ ಕರ್ನಾಟಕದ ರಾಜಕೀಯ ಭವಿಷ್ಯದ ಕುರಿತಾದ ಸುಳ್ಳು ಸಮೀಕ್ಷೆಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ.

ಇತ್ತೀಚೆಗೆ ‘ಜನತಾ ಕೀ ಬಾತ್’ ಎಂಬ ಹೆಸರಿನ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಾರ್ಟಿ(ಬಿಜೆಪಿ) 135  ಸೀಟುಗಳಲ್ಲಿ ಗೆದ್ದು ಸರ್ಕಾರ ರಚಿಸಲಿದೆ ಎಂಬಂತಹ ಸಂದೇಶ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಇದನ್ನು ಪ್ರತಿಷ್ಠಿತ ಬಿಬಿಸಿ ಸಂಸ್ಥೆ ಮಾಡಿಸಿದೆ ಎಂದು ಈ ಸಂದೇಶದಲ್ಲಿ ಹೇಳಲಾಗಿದ್ದು, ಬಿಬಿಸಿ ಲಾಂಛನ ಮತ್ತು ವೆಬ್‌ಸೈಟ್ ಲಿಂಕ್ ಕೂಡ ಇದೆ. ಬಿಜೆಪಿಗೆ ಭರ್ಜರಿ ಬಹುಮತ ಸಿಗಲಿದ್ದು, ಕಾಂಗ್ರೆಸ್ ಕೇವಲ ಕಾಂಗ್ರೆಸ್ 35 ಹಾಗೂ ಜನತಾದಳ 45, ಇತರರು 19 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಈ ಸಂದೇಶ ವಾಟ್ಸ್ ಆ್ಯಪ್, ಫೇಸ್‌ಬುಕ್ ಟ್ವೀಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಬಿಬಿಸಿ ಸುದ್ದಿ ಸಂಸ್ಥೆ ನಿಜಕ್ಕೂ ‘ಜನತಾ ಕೀ ಬಾತ್’ ಹೆಸರಿನಲ್ಲಿ ಸಮೀಕ್ಷೆ ನಡೆಸಿತ್ತೇ ಎಂದು ‘ಆಲ್ಟ್ ನ್ಯೂಸ್’ ತನಿಖೆಗೆ ಮುಂದಾದಾಗ ಇದೊಂದು ಸುಳ್ಳು ಸಮೀಕ್ಷೆ ಎಂಬುದು ಪತ್ತೆಯಾಗಿದೆ. 

ಏಕೆಂದರೆ ಬಿಬಿಸಿ ಸುದ್ದಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್, ಜಾಲತಾಣಗಳಲ್ಲಿ ಈ ಕುರಿತ ವಿಷಯ ಪ್ರಸ್ತಾಪವಾಗಿಲ್ಲ. ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಲು ಈ ರೀತಿ ಬಿಬಿಸಿ ಲೋಗೋವನ್ನು  ಬಳಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಕರ್ನಾಟಕದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿವೆ. ಆದರೆ ಸಮೀಕ್ಷೆಯಲ್ಲಿ 234(135 +45+35+19) ವಿಧಾನಸಭಾ ಕ್ಷೇತ್ರ ಎಂದಿದೆ. ಹಾಗಾಗಿ ಜನತಾ ಕೀ ಬಾತ್ ಎಂಬ ಹೆಸರಿನಲ್ಲಿ ಬಿಬಿಸಿ ಸಮೀಕ್ಷೆ ನಡೆಸಿದೆ ಎನ್ನಲಾದ ಸುದ್ದಿ ಸುಳ್ಳು ಎಂಬಂತಾಗಿದೆ.

click me!