ಬಳಕೆಯಲ್ಲಿ ಇಲ್ಲದ ವಾಟರ್ ಟ್ಯಾಂಕ್‌ನೊಳಗೆ ಅಂದಾಜು 30ಕ್ಕೂ ಹೆಚ್ಚು ಕೋತಿಗಳು ಬಿದ್ದ ಪರಿಣಾಮ, ಆಹಾರವಿಲ್ಲದೆ ಬಳಸಿ ಸಾವು ಕಂಡಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ (ಡಿ. 17): ಜನರ ಬಳಕೆಯಲ್ಲಿ ಇಲ್ಲದ ವಾಟರ್ ಟ್ಯಾಂಕ್‌ನಲ್ಲಿ 30ಕ್ಕೂ ಅಧಿಕ ಕೋತಿಗಳು ಬಿದ್ದ ಪರಿಣಾಮ ಆಹಾರವಿಲ್ಲದೆ ಬಳಲಿ ಸಾವು ಕಂಡಿವೆ. ಇಲ್ಲಿನ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಳಕೆಯಲ್ಲಿಲ್ಲದ ಶೀಥಿಲಾವಸ್ಥೆಯ ಟ್ಯಾಂಕ್ ನೊಳಗೆ ನೀರಿಗಾಗಿ ಕೆಲವು ಕೋತಿಗಳು ಜಿಗಿದಿದ್ದವು. ಒಂದರಂತೆ ಇನ್ನೊಂದು ಈ ರೀತಿ 30 ಕ್ಕೂ ಹೆಚ್ಚು ಕೋತಿಗಳು ಟ್ಯಾಂಕ್ ನೊಳಗೆ ಬಿದ್ದು ಪರದಾಟ ನಡೆಸುತ್ತಿದ್ದವು. ಹಲವು ದಿನಗಳಿಂದ ಮೇಲೆ ಬರಲು ಶ್ರಮ ವಹಿಸಿದ್ದರೂ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಆಹಾರವಿಲ್ಲದೇ ನಿತ್ರಾಣಗೊಂಡು ಕೋತಿಗಳು ಸಾವು ಕಂಡಿವೆ. ಬಳಕೆಯಲ್ಲಿಲ್ಲದ ವಾಟರ್ ಟ್ಯಾಂಕ್ ಬಳಿ ವಿಪರಿತ ದುರ್ವಾಸನೆ ಶುರುವಾದಾಗ ಗ್ರಾಮಸ್ಥರು ಇದನ್ನು ಗಮನಿಸಿದ್ದಾರೆ. ಗ್ರಾಮಸ್ಥರ ಗಮನಕ್ಕೆ ಬಂದಾಗ ಹಗ್ಗ ಇಳಿಬಿಟ್ಟು ಹಲವು ಕೋತಿಗಳ ರಕ್ಷಣೆ ಮಾಡಿದ್ದಾರೆ. ಹಾಗಿದ್ದರೂ 30 ಕ್ಕೂ ಹೆಚ್ಚು ಕೋತಿಗಳು ಸಾಮೂಹಿಕ ಸಾವು ಕಂಡಿದೆ. ಕೋತಿಗಳ ಸಾವಿನ ಹಿನ್ನಲೆ ಗ್ರಾಮದಲ್ಲಿಗ ಸಾಂಕ್ರಾಮಿಕ ರೋಗ ಭೀತಿ ಕೂಡ ಶುರುವಾಗಿದೆ.