
ಟೆಕ್ನಾಲಜಿ ಎಷ್ಟೇ ವೇಗವಾಗಿ ಬೆಳಿತಿದ್ರೂ ಇಂದಿಗೂ ಸಾಕಷ್ಟು ಯುವಕರಿಗೆ ಸರ್ಕಾರಿ ಕೆಲಸದ ಮೇಲೆ ಆಸಕ್ತಿ ಇದೆ. ಇದಕ್ಕೆ ಮುಖ್ಯ ಕಾರಣ ಕೆಲಸದ ಭದ್ರತೆ. ಆದರೆ ಈಗ ಸಂಬಳದ ಜೊತೆಗೆ ಎಷ್ಟು ರಜೆ ಸಿಗುತ್ತೆ, ಮೆಡಿಕಲ್ ಸೌಲಭ್ಯ ಇದೆಯಾ, ಟ್ರಾವೆಲ್ ಅಲೌನ್ಸ್ ಸಿಗುತ್ತಾ, ವರ್ಕ್-ಲೈಫ್ ಬ್ಯಾಲೆನ್ಸ್ ಹೇಗಿದೆ ಅನ್ನೋದಕ್ಕೂ ಅಭ್ಯರ್ಥಿಗಳು ಗಮನ ಕೊಡುತ್ತಿದ್ದಾರೆ. ಹೀಗಾಗಿ ಉತ್ತಮ ಸಂಬಳದ ಜೊತೆಗೆ ರಜೆ ಮತ್ತು ಬೇರೆ ಸೌಲಭ್ಯಗಳೂ ಸಿಗುವ ಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಉದ್ಯೋಗಗಳ ಮೇಲೆ ಅವರಿಗೆ ಆಸಕ್ತಿ ಹೆಚ್ಚಾಗ್ತಿದೆ.
ರಜೆ ವಿಚಾರಕ್ಕೆ ಬಂದರೆ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಗಳ ಬಗ್ಗೆ ಸಾಕಷ್ಟು ಜನ ಆಸಕ್ತಿ ತೋರುತ್ತಾರೆ. ಎಸ್ಬಿಐನ ಅಧಿಕೃತ ಮಾಹಿತಿಯ ಪ್ರಕಾರ, ಪ್ರೊಬೇಷನರಿ ಆಫೀಸರ್ಗಳಿಗೆ ವರ್ಷಕ್ಕೆ 33 ದಿನಗಳ ಪ್ರಿವಿಲೇಜ್ ಲೀವ್ ಮತ್ತು 12 ದಿನಗಳ ಕ್ಯಾಶುವಲ್ ಲೀವ್ ಸಿಗುತ್ತದೆ. ಇದರ ಜೊತೆಗೆ ಸಿಕ್ ಲೀವ್, ಮ್ಯಾಟರ್ನಿಟಿ ಲೀವ್ ಸೇರಿದಂತೆ ಹಲವು ಸೌಲಭ್ಯಗಳಿವೆ. ಮಕ್ಕಳ ಅಥವಾ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಅರ್ಹ ಏಕಾಂಗಿ ಪುರುಷ ಉದ್ಯೋಗಿಗಳಿಗೆ ಎರಡು ವರ್ಷಗಳವರೆಗೆ ಸ್ಯಾಬಾಟಿಕಲ್ ಲೀವ್ ಪಡೆಯುವ ಅವಕಾಶವೂ ಇದೆ. ಲೀವ್ ಟ್ರಾವೆಲ್ ಕನ್ಸೆಷನ್ ಸೌಲಭ್ಯ ಕೂಡ ಇದೆ.
ಎಸ್ಬಿಐನ ಅಧಿಕೃತ ಕರಿಯರ್ ವೆಬ್ಸೈಟ್ ಪ್ರಕಾರ, ಮುಂಬೈನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗೆ ವಾರ್ಷಿಕ ಒಟ್ಟು CTC ಸುಮಾರು 18.67 ಲಕ್ಷ ರೂಪಾಯಿ ಇದೆ. ಇದರಲ್ಲಿ ಲೀಸ್ಡ್ ರೆಂಟಲ್ ಅಕಾಮೊಡೇಶನ್ ಮತ್ತು ಕನ್ವೆಯನ್ಸ್ ಅಲೌನ್ಸ್ನಂತಹ ಸೌಲಭ್ಯಗಳೂ ಸೇರಿವೆ. ಹಾಗಾಗಿ ಈ ಹುದ್ದೆ ಮೇಲೆ ಜೆನ್ ಜಿಗಳ ಕಣ್ಣಿದೆ.
ಆರ್ಬಿಐ ಗ್ರೇಡ್ ಬಿ
ಆರ್ಬಿಐನ ಗ್ರೇಡ್ ಬಿ ಆಫೀಸರ್ ಹುದ್ದೆಯಲ್ಲೂ ಉತ್ತಮ ಸಂಬಳದ ಜೊತೆಗೆ ಹಲವು ಸೌಲಭ್ಯಗಳಿವೆ. 2025ರ ಆರ್ಬಿಐ ನೇಮಕಾತಿ ಅಧಿಸೂಚನೆಯ ಪ್ರಕಾರ, ಗ್ರೇಡ್ ಬಿ ಅಧಿಕಾರಿಯ ಮೂಲ ವೇತನ ತಿಂಗಳಿಗೆ 78,450 ರೂಪಾಯಿ. ಹೆಚ್ ಆರ್ ಎ ಹೊರತುಪಡಿಸಿ ಆರಂಭಿಕ ಒಟ್ಟು ವೇತನ ಸುಮಾರು 1.50 ಲಕ್ಷ ರೂಪಾಯಿ. ಇದರ ಜೊತೆಗೆ ಬ್ಯಾಂಕ್ ವಸತಿ, ಮೆಡಿಕಲ್ ಸೌಲಭ್ಯ, ಲೀವ್ ಫೇರ್ ಕನ್ಸೆಷನ್, ಫರ್ನಿಶಿಂಗ್ ಅಲೌನ್ಸ್, ಸಾಲ ಸೇರಿದಂತೆ ಹಲವು ಸೌಲಭ್ಯಗಳಿವೆ. ಆದರೆ ಆರ್ಬಿಐ ಉದ್ಯೋಗಿಗಳ ರಜೆಗಳಿಗೆ ಬ್ಯಾಂಕ್ನದೇ ಸೇವಾ ನಿಯಮಗಳು ಅನ್ವಯಿಸುತ್ತವೆ. ಹೀಗಾಗಿ ಗ್ರೇಡ್ ಬಿ ಅಧಿಕಾರಿಗಳಿಗೆ ನಿಗದಿಯಾಗಿರುವ ರಜೆಗಳ ಬಗ್ಗೆ ಕೇಂದ್ರ ಸರ್ಕಾರಿ ನೌಕರರ ನಿಯಮಗಳನ್ನೇ ಅನ್ವಯಿಸಲು ಸಾಧ್ಯವಿಲ್ಲ.
ಕೇಂದ್ರ ಸರ್ಕಾರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳು
ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಉದ್ಯೋಗಿಗಳಿಗೆ CCS ಲೀವ್ ನಿಯಮಗಳು ಅನ್ವಯಿಸುತ್ತವೆ. ಇದರ ಅಡಿಯಲ್ಲಿ ಅರ್ಜಿತ ರಜೆ, ಹಾಫ್ ಪೇ ಲೀವ್, ಕ್ಯಾಶುವಲ್ ಲೀವ್ ಸೇರಿದಂತೆ ಹಲವು ರೀತಿಯ ರಜೆಗಳು ಸಿಗುತ್ತವೆ. ಮಕ್ಕಳನ್ನು ನೋಡಿಕೊಳ್ಳಲು ಅರ್ಹ ಉದ್ಯೋಗಿಗಳಿಗೆ ಚೈಲ್ಡ್ ಕೇರ್ ಲೀವ್ ಸೌಲಭ್ಯವೂ ಇದೆ. 2018ರ ತಿದ್ದುಪಡಿಯ ಪ್ರಕಾರ, ಮೊದಲ 365 ದಿನಗಳ ಚೈಲ್ಡ್ ಕೇರ್ ಲೀವ್ಗೆ ಶೇ.100ರಷ್ಟು ರಜೆ ವೇತನ ಮತ್ತು ಮುಂದಿನ 365 ದಿನಗಳಿಗೆ ಶೇ.80ರಷ್ಟು ರಜೆ ವೇತನ ನೀಡುವ ನಿಯಮ ಇದೆ.
ಎಲ್ಲಾ ಸರ್ಕಾರಿ ಕೆಲಸಗಳಲ್ಲೂ ಒಂದೇ ರೀತಿಯ ರಜೆ ಇರೋದಿಲ್ಲ. ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು ಮತ್ತು ನಿಯಂತ್ರಕ ಸಂಸ್ಥೆಗಳ ಅಧಿಕಾರಿಗಳಿಗೆ ಬೇರೆ ಬೇರೆ ಸೇವಾ ನಿಯಮಗಳು ಅನ್ವಯಿಸುತ್ತವೆ. ಇದೆಲ್ಲವನ್ನು ಗಮನಿಸಿ ಜೆನ್ ಜಿಗಳು ಉದ್ಯೋಗ ಆಯ್ಕೆ ಮಾಡಿಕೊಳ್ತಿದ್ದಾರೆ.