2018-19ನೇ ಸಾಲಿನ SSLC ಫಲಿತಾಂಶ ಪ್ರಕಟ| ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ| ಈ ವರ್ಷ ಶೇ. 73.7ರಷ್ಟು ಫಲಿತಾಂಶ| ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ
ಬೆಂಗಳೂರು[ಏ.30]: 2018-19ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದೆ. ಈ ವರ್ಷ ಶೇ. 73.7ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗಿಂತ ಈ ವರ್ಷ 1.8ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಮಲ್ಲೇಶ್ವರಂನಲ್ಲಿರುವ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಹಾಗೂ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ರಿಸಲ್ಟ್ ಪ್ರಕಟಿಸಿದ್ದಾರೆ.
undefined
ಈ ಬಾರಿಯೂ ಗ್ರಾಮೀಣ ವಿದ್ಯಾರ್ಥಿಗಳೇ ಮುಂಚೂಣಿಯಲ್ಲಿದ್ದಾರೆ. ಈ ವರ್ಷ ಶೇ. 73.7ರಷ್ಟು ಫಲಿತಾಂಶ ಬಂದಿದ್ದು, ಇಬ್ಬರು ವಿದ್ಯಾರ್ಥಿನಿಯರು 625 ಅಂಕಗಳಿಗೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 11 ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದು, 43 ವಿದ್ಯಾರ್ಥಿಗಳು 621 ಅಂಕ ಪಡೆದಿದ್ದಾರೆ.
ಸರ್ಕಾರಿ ಶಾಲೆಗಳ ಫಲಿತಾಂಶ ಶೇ.77.8 ರಷ್ಟಾಗಿದ್ದರೆ, ಅನುದಾನ ಸಹಿತ ಶಾಲೆಗಳ ಫಲಿತಾಂಶ ಶೇ.77.21 ರಷ್ಟು. ಶೇ. 75.79ರಷ್ಟು ಹೆಣ್ಣುಮಕ್ಕಳು ಉತ್ತೀರ್ಣರಾಗಿದ್ದು, ಎಂದಿನಂತೆ ಈ ಬಾರಿಯೂ ಹೆಣ್ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶೇ.68.46 ರಷ್ಟು ಬಾಲಕರು ಉತೀರ್ಣರಾಗಿದ್ದಾರೆ. ಪೂರಕ ಪರೀಕ್ಷೆ ಜೂನ್ 21 ರಿಂದ ಆರಂಭವಾಗಲಿದೆ.
ಯಾವ ಜಿಲ್ಲೆಗೆ ಯಾವ ಸ್ಥಾನ?
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದರೆ, ರಾಮನಗರ- 2ನೇ ಸ್ಥಾನ ಪಡೆದಿದೆ ಹಾಗೂ ಬೆಂಗಳೂರು ಗ್ರಾಮಾಂತರ 3ನೇ ಸ್ಥಾನದಲ್ಲಿದೆ. ಈ ಬಾರಿ ಉತ್ತರ ಕನ್ನಡ 4ನೇ ಸ್ಥಾನ ಪಡೆದಿದ್ದು, ಉಡುಪಿ 5ನೇ ಸ್ಥಾನದಲ್ಲಿದೆ ಹಾಗೂ ಯಾದಗಿರಿ ಕೊನೆಯ ಸ್ಥಾನ ಪಡೆದಿದೆ.
ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೇ ಪ್ರಥಮ
ಸೃಜನಾ ಡಿ ಹಾಗೂ ನಾಗಾಂಜಲಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದಿದ್ದಾರೆ. ಇವರು 625 ಅಂಕಗಳಿಗೆ 625 ಅಂಕ ಗಳಿಸಿದ್ದಾರೆ. ಸೃಜನಾ ಡಿ ಆನೇಕಲ್ ನಿವಾಸಿಯಾಗಿದ್ದು, ನಾಗಾಂಜಲಿ ಕುಮಟಾ ನಿವಾಸಿಯಾಗಿದ್ದಾರೆ.
ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಗಳಾದ www.kaceb.kar.nic.in ಹಾಗೂ www.karresults.nic.in ಫಲಿತಾಂಶ ಪ್ರಕಟವಾಗೊಳ್ಳಲಿದೆ. ಪಾಸಾದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ನಂಬರ್ಗೆ ಮೆಸೇಜ್ ಮಾಡಲಾಗುತ್ತದೆ. ಆಯಾ ಶಾಲೆಗಳಲ್ಲಿ ಬುಧವಾರ ಫಲಿತಾಂಶ ಪ್ರಕಟ ಆಗಲಿದೆ.
ಆನ್ ಲೈನ್ ನಲ್ಲಿ SSLC ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?
* ಅಧಿಕೃತ ವೆಬ್ ತಾಣ www.kaceb.kar.nic.in ಎಂದು ಗೂಗಲ್‌ನಲ್ಲಿ ಟೈಪ್ ಮಾಡಿ. ನಂತರ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.
* ನಂತರ 'SSLC Result' ಎನ್ನುವ ಲಿಂಕ್ ಕ್ಲಿಕ್ ಮಾಡಿ.ಅಲ್ಲಿ ಬಾಕ್ಸ್ ಓಪನ್ ಆಗುತ್ತೆ.
* ಅಲ್ಲಿ ಕೇಳುವ ನಿಮ್ಮ ರೋಲ್ ನಂಬರ್ (ಹಾಲ್ ಟಿಕೇಟ್ ನಂಬರ್) ಹಾಗೂ ಇನ್ನಿತರ ಮಾಹಿತಿ ನಮೂದಿಸಿ.
* submit ಬಟನ್ ಒತ್ತಿ.
* ಫಲಿತಾಂಶದ ಪ್ರತಿ ಪಡೆಯಲು ಅಲ್ಲೇ ಇರುವ ಡೌನ್‌ಲೋಡ್ ಮೇಲೆ ಕ್ಲಿಕ್ಕಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. 34 ಶೈಕ್ಷಣಿಕ ಜಿಲ್ಲೆಗಳ 2,847 ಪರೀಕ್ಷಾ ಕೇಂದ್ರಗಳಲ್ಲಿ 4 ಸಾವಿರದ ಆರುನೂರ ಐವತ್ತೊಂದು ವಿಕಲಚೇತನ ವಿದ್ಯಾರ್ಥಿಗಳು ಸೇರಿ 8 ಲಕ್ಷದ 41 ಸಾವಿರದ 666 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.