ಬೀದಿಗೆ ಬಂದ ಟೆಕ್ಕಿ ಬದುಕು: 35,00,000 ಸಂಬಳದ ಕೆಲಸ ಹೋಗಿ, ₹6.5 ಲಕ್ಷಕ್ಕೆ ಇಳಿಕೆ! ಆಫರ್ ಲೆಟರ್ ಕಿತ್ತುಕೊಂಡ AI?

Published : Jul 22, 2026, 09:27 AM IST
Techie 35 lakh package job offer revoked

ಸಾರಾಂಶ

ವಾರ್ಷಿಕ 35 ಲಕ್ಷ ರೂಪಾಯಿ ಸಂಬಳದ ಉದ್ಯೋಗದ ಭರವಸೆ ಪಡೆದಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗೆ, ಇಂಟರ್ನ್‌ಶಿಪ್ ಮುಗಿಯಲು ಎರಡು ದಿನಗಳಿರುವಾಗ ಕಂಪನಿ ಉದ್ಯೋಗ ನಿರಾಕರಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೇಲೆ ಹೂಡಿಕೆ ಮಾಡುವ ಕಾರಣ ನೀಡಿ, 90 ಇಂಟರ್ನ್‌ಗಳ ಉದ್ಯೋಗದ ಭರವಸೆಯನ್ನು ಕಂಪನಿ ಹಿಂಪಡೆದಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟೆಕ್ ವಲಯದಲ್ಲಿ ಉದ್ಯೋಗ ಕಡಿತ ಮತ್ತು ನೇಮಕಾತಿ ಸ್ಥಗಿತದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ, ಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಅನುಭವ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಸಖತ್ ವೈರಲ್ ಆಗಿದೆ. ಆರು ತಿಂಗಳ ಇಂಟರ್ನ್‌ಶಿಪ್ ಯಶಸ್ವಿಯಾಗಿ ಮುಗಿಸಿದರೆ, ವರ್ಷಕ್ಕೆ 35 ಲಕ್ಷ ರೂಪಾಯಿ ಸಂಬಳದ ಪರ್ಮನೆಂಟ್ ಕೆಲಸ ಸಿಗುತ್ತದೆ ಎಂದು ಕಂಪನಿ ಭರವಸೆ ನೀಡಿತ್ತು. ಆದರೆ, ಇಂಟರ್ನ್‌ಶಿಪ್ ಮುಗಿಯಲು ಕೇವಲ ಎರಡು ದಿನ ಬಾಕಿ ಇರುವಾಗ ಆ ಭರವಸೆಯನ್ನು ಕಂಪನಿ ಹಿಂಪಡೆದಿದೆ ಎಂದು ಆ ಯುವಕ ಹೇಳಿಕೊಂಡಿದ್ದಾನೆ.

ಇಂಟರ್ನ್‌ಶಿಪ್ ಅವಧಿಯಲ್ಲಿ ಅತ್ಯುತ್ತಮ ಕೆಲಸ

'ನೈಟ್ ಫ್ಯೂರಿ ಜಿಟಿ' ಎಂಬ ಹೆಸರಿನಲ್ಲಿ ಈ ಯುವಕ ರೆಡ್ಡಿಟ್‌ನಲ್ಲಿ ತನ್ನ ಕಥೆ ಹಂಚಿಕೊಂಡಿದ್ದಾನೆ. ತಾನು ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದಿದ್ದು, ಇಂಟರ್ನ್‌ಶಿಪ್ ಅವಧಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ತನ್ನ ಮ್ಯಾನೇಜರ್ ಕೂಡ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಮತ್ತು ಖಾಯಂ ಉದ್ಯೋಗದ ಬಗ್ಗೆ ಚಿಂತೆ ಮಾಡಬೇಡ ಎಂದು ಹಲವು ಬಾರಿ ಭರವಸೆ ನೀಡಿದ್ದರು ಎಂಬುದನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾನೆ.

ಎಐ ಮೇಲೆ ಹೂಡಿಕೆ

ಆದರೆ, ಇಂಟರ್ನ್‌ಶಿಪ್ ಮುಗಿಯಲು ಕೇವಲ ಎರಡು ದಿನಗಳಿರುವಾಗ, ಬ್ಯಾಚ್‌ನಲ್ಲಿದ್ದ ಎಲ್ಲಾ 90 ಇಂಟರ್ನ್‌ಗಳಿಗೂ ಒಂದೇ ಬಾರಿಗೆ ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಇ-ಮೇಲ್ ಬಂದಿದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡುತ್ತಿದ್ದೇವೆ ಎಂದು ಕಂಪನಿ ಕಾರಣ ನೀಡಿದೆ ಎಂದು ಯುವಕ ವಿವರಿಸಿದ್ದಾನೆ.

35 ಲಕ್ಷದಿಂದ 6.5 ಲಕ್ಷ ಪ್ಯಾಕೇಜ್

ಆದರೆ, ಆತನಿಗೆ ಎದುರಾದ ದೊಡ್ಡ ಹೊಡೆತ ಕೇವಲ ಕೆಲಸ ಕಳೆದುಕೊಂಡಿದ್ದಷ್ಟೇ ಅಲ್ಲ. ಇಂಟರ್ನ್‌ಶಿಪ್ ಜೊತೆಗೆ ಖಾಯಂ ಉದ್ಯೋಗದ ಭರವಸೆ ಇದ್ದುದರಿಂದ, ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಸಿಕ್ಕಿದ್ದ ಬೇರೆ ಅವಕಾಶಗಳಿಂದ ಆತನನ್ನು ಹೊರಗಿಡಲಾಗಿತ್ತು. ಈಗ ಕಂಪನಿ ಉದ್ಯೋಗ ನಿರಾಕರಿಸಿದ್ದರಿಂದ, ಆತನ ಕೈಯಲ್ಲಿ ಉಳಿದಿದ್ದು ವರ್ಷಕ್ಕೆ ಕೇವಲ 6.5 ಲಕ್ಷ ರೂಪಾಯಿ ಸಂಬಳದ ಮತ್ತೊಂದು ಆಫರ್ ಮಾತ್ರ. ಇದು ಇಂಟರ್ನ್‌ಶಿಪ್ ವೇಳೆ ಸಿಗುತ್ತಿದ್ದ ಸ್ಟೈಪೆಂಡ್‌ಗಿಂತಲೂ ಕಡಿಮೆ ಎಂದು ಆತ ನೋವು ತೋಡಿಕೊಂಡಿದ್ದಾನೆ. ಕ್ಯಾಂಪಸ್ ಹೊರಗೆ ಕೂಡ ಉದ್ಯೋಗಾವಕಾಶಗಳು ತುಂಬಾ ಕಡಿಮೆಯಾಗಿವೆ. 'ಗೂಗಲ್ ಸಮ್ಮರ್ ಆಫ್ ಕೋಡ್' ನಂತಹ ಪ್ರತಿಷ್ಠಿತ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ ಅನುಭವವಿದ್ದರೂ, ಉತ್ತಮ ಅವಕಾಶಗಳನ್ನು ಹುಡುಕುವುದು ಕಷ್ಟವಾಗಿದೆ ಎಂದು ಆತ ಬರೆದುಕೊಂಡಿದ್ದಾನೆ.

ಇಂಟರ್ನಿ ಕೆಲಸ ಮಾಡಿಸಿಕೊಂಡು ಕೈಕೊಟ್ಟ ಕಂಪನಿ

ಈ ಪೋಸ್ಟ್ ರೆಡ್ಡಿಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಹೆಚ್ಚಿನ ಸಂಬಳದ ಆಸೆ ತೋರಿಸಿ ಇಂಟರ್ನ್‌ಗಳಿಂದ ಪೂರ್ತಿ ಕೆಲಸ ಮಾಡಿಸಿಕೊಂಡು, ಕೊನೆ ಕ್ಷಣದಲ್ಲಿ ಕಂಪನಿ ಕೈಕೊಟ್ಟಿದೆ ಎಂದು ಕೆಲವರು ಟೀಕಿಸಿದ್ದಾರೆ. ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಕೆಲಸವನ್ನು ಒಪ್ಪಿಕೊಂಡು, ಮುಂದೆ ಉದ್ಯೋಗ ಮಾರುಕಟ್ಟೆ ಸುಧಾರಿಸಿದಾಗ ಉತ್ತಮ ಅವಕಾಶಗಳನ್ನು ಹುಡುಕುವುದು ಸದ್ಯದ ಪರಿಸ್ಥಿತಿಯಲ್ಲಿ ಜಾಣತನದ ನಿರ್ಧಾರ ಎಂದು ಹಲವರು ಆ ಯುವಕನಿಗೆ ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

Job: ಅಗ್ನಿವೀರ್‌ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್‌: ಶೇ.25 ಅಲ್ಲ, ಬರೋಬ್ಬರಿ ಶೇ. 75ರಷ್ಟು ಅಭ್ಯರ್ಥಿಗಳಿಗೆ ಖಾಯಂ ಸೇವಾ ಅವಕಾಶ?
12 ಬಾರಿ ಗೂಗಲ್‌ನಿಂದ ರಿಜೆಕ್ಟ್! 13ನೇ ಪ್ರಯತ್ನದಲ್ಲಿ ಕೋಟಿ ಆಫರ್ ಗಿಟ್ಟಿಸಿಕೊಂಡ ಟೆಕ್ಕಿಯ ಕಥೆ ವೈರಲ್..!