ಎಂಜಿನಿಯರ್‌, ವೈದ್ಯ ಹುದ್ದೆಗೆ ಕೆಪಿಎಸ್‌ಸಿ ಸಂದರ್ಶನ ಇಲ್ಲ

By Kannadaprabha News  |  First Published Dec 31, 2019, 7:40 AM IST

ವೈದ್ಯರು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು ಸಹ ‘ಎ’ ದರ್ಜೆಯ ಅಧಿಕಾರಿಗಳೇ ಆಗಿದ್ದು ಕೆಪಿಎಸ್‌ಸಿಯಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಆದರೆ ವೃತ್ತಿಪರವಾದ ಈ ಹುದ್ದೆಗಳಿಗೆ ಸಂದರ್ಶನ ಅಗತ್ಯವಿಲ್ಲ ಎಂಬ ಕಾರಣಕ್ಕೆ ಸಂದರ್ಶನದಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.


ಬೆಂಗಳೂರು [ಡಿ.31]:  ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ನೇಮಕಾತಿ ವೇಳೆ ‘ಎ’ ಹಾಗೂ ‘ಬಿ’ ದರ್ಜೆಯ ನಿರ್ದಿಷ್ಟಹುದ್ದೆಗಳಿಗೆ ಸಂದರ್ಶನ ನಡೆಸದೆ ಲಿಖಿತ ಪರೀಕ್ಷೆಯ ಮೂಲಕವೇ ನೇಮಕಾತಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಕೆಪಿಎಸ್‌ಸಿಯಿಂದ ನಡೆಸಲಾಗುವ (ಕೆಎಎಸ್‌) ಪರೀಕ್ಷೆ ವೇಳೆ ರಾರ‍ಯಂಕ್‌ ಆಧಾರದ ಮೇಲೆ ಉಪ ವಿಭಾಗಾಧಿಕಾರಿ, ಡಿವೈಎಸ್‌ಪಿ, ತಹಶೀಲ್ದಾರ್‌, ತೆರಿಗೆ ಅಧಿಕಾರಿ, ಖಜಾನೆ ಅಧಿಕಾರಿಗಳು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ಇವರಿಗೆ ಲಿಖಿತ ಪರೀಕ್ಷೆ ಜತೆಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

Tap to resize

Latest Videos

undefined

ಇದಲ್ಲದೆ ವೈದ್ಯರು, ಎಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು ಸಹ ‘ಎ’ ದರ್ಜೆಯ ಅಧಿಕಾರಿಗಳೇ ಆಗಿದ್ದು ಕೆಪಿಎಸ್‌ಸಿಯಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ಆದರೆ ವೃತ್ತಿಪರವಾದ ಈ ಹುದ್ದೆಗಳಿಗೆ ಸಂದರ್ಶನ ಅಗತ್ಯವಿಲ್ಲ ಎಂಬ ಕಾರಣಕ್ಕೆ ಸಂದರ್ಶನದಿಂದ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಿ ಹಾಗೂ ಡಿ ದರ್ಜೆ ಹುದ್ದೆಗಳಿಗೆ ಕೇವಲ ಲಿಖಿತ ಪರೀಕ್ಷೆ ಆಧಾರದ ಮೇಲೆಯೇ ನೇಮಕ ಮಾಡಲಾಗುತ್ತದೆ. ಅದೇ ರೀತಿ ಎ ಹಾಗೂ ಬಿ ದರ್ಜೆಯ ಹುದ್ದೆಗಳಿಗೂ ಕೆಲವು ಇಲಾಖೆಗಳಿಗೆ ಸಂದರ್ಶನ ನಡೆಸದೆ ನೇರ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. ನಮ್ಮ ಪ್ರಕಾರ ವೃತ್ತಿಪರ ಹುದ್ದೆಗಳಾದ ವೈದ್ಯರು, ಎಂಜಿನಿಯರ್‌ಗಳ ನೇಮಕಾತಿಗೆ ಸಂದರ್ಶನ ಅಗತ್ಯವಿಲ್ಲ. ಹೀಗಾಗಿ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಮಂಡಳಿಗೆ ಶಾಸಕರೂ ಅಧ್ಯಕ್ಷ:

ಇದೇ ವೇಳೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿ ನೇಮಕಗೊಳ್ಳಲು ರಾಜ್ಯ ಸರ್ಕಾರದ ಸಚಿವರು ಆಗಿರಬೇಕು ಎಂಬ ನಿಯಮ ಸಡಿಲಿಸಿ ವಿಧಾನಪರಿಷತ್‌ ಹಾಗೂ ವಿಧಾನಸಭೆ ಸದಸ್ಯರು ಅಧ್ಯಕ್ಷರಾಗಲು ಅವಕಾಶ ಮಾಡಿಕೊಟ್ಟು ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಭೂತದ ಕಾಟದ ರೋಗಿಗಳ ಚಿಕಿತ್ಸೆಗೆ ಬಂತು ಕೋರ್ಸ್...

ಸಚಿವರ ಬದಲು ಆ ಭಾಗದ ಯಾವುದಾದರೂ ಶಾಸಕರನ್ನು ನೇಮಕ ಮಾಡಲು ಅವಕಾಶ ನೀಡಲಾಗಿದೆ. ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುವುದು. ಈ ಮೂಲಕ ಭಾಗದಲ್ಲಿ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡಲಾಗುವುದು ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಕಾನೂನು ಶಾಲೆಯಲ್ಲಿ ಸ್ಥಳೀಯರಿಗೆ ಮೀಸಲಾತಿ:

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕರ್ನಾಟಕದಲ್ಲಿ 10 ವರ್ಷ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಶೇ.25 ರಷ್ಟುಮೀಸಲಾತಿ ಕಲ್ಪಿಸಿ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಹಿಂದಿನ ಸರ್ಕಾರ ಶೇ.50ರಷ್ಟುಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸುವಂತೆ ಕಾಯಿದೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಪ್ರಾದೇಶಿಕ ಮೀಸಲಾತಿ ನೀಡಲು ಸಾಧ್ಯವಿಲ್ಲ. ಬದಲಿಗೆ ಸಾಂಸ್ಥಿಕ ಮೀಸಲಾತಿ ನೀಡಬಹುದು ಎಂದು ರಾಜ್ಯಪಾಲರ ಕಚೇರಿ ಸಲಹೆ ನೀಡಿತ್ತು. ಇದರಂತೆ 10 ವರ್ಷ ಕರ್ನಾಟಕದಲ್ಲಿ ಓದಿರುವ ಶೇ.25 ರಷ್ಟುಮಂದಿಗೆ ಮೀಸಲಾತಿ ನೀಡಬೇಕು ಎಂದು ಪರಿಷ್ಕೃತ ವಿಧೇಯಕ ಮಂಡಿಸಿ ರಾಜ್ಯಪಾಲರಿಗೆ ಕಳುಹಿಸಲಾಗುವುದು. ರಾಜ್ಯದಲ್ಲಿ 10 ವರ್ಷ ಓದಿರಬೇಕು ಎಂಬ ನಿಯಮ ಮಾಡುತ್ತಿದ್ದೇವೆಯೇ ಹೊರತು ಕನ್ನಡ ಮಾಧ್ಯಮದಲ್ಲೇ ಓದಿರಬೇಕು ಎಂಬ ಷರತ್ತು ಇಲ್ಲ ಎಂದು ಮಾಧುಸ್ವಾಮಿ ಸ್ಪಷ್ಟಪಡಿಸಿದರು.

click me!