Microsoft layoffs: ತನ್ನ 2 ವಿಭಾಗ ಮುಚ್ಚುವ ಹಂತ, ಮೈಕ್ರೋಸಾಫ್ಟ್ ನಿಂದ 4800 ಉದ್ಯೋಗಿಗಳ ವಜಾ!

Published : Jul 07, 2026, 12:19 PM IST
microsoft soft layoff

ಸಾರಾಂಶ

ಜಾಗತಿಕ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್, ತನ್ನ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಸುಮಾರು 4,800 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಉದ್ಯೋಗ ಕಡಿತವು ಮುಖ್ಯವಾಗಿ ಕಂಪನಿಯ ವಾಣಿಜ್ಯ ಮಾರಾಟ ಮತ್ತು ಎಕ್ಸ್‌ಬಾಕ್ಸ್ ಗೇಮಿಂಗ್ ವಿಭಾಗಗಳ ಮೇಲೆ ಪರಿಣಾಮ ಬೀರಿದ್ದು, ಆಂತರಿಕ ಪುನರ್ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

ವಾಷಿಂಗ್ಟನ್: ಜಾಗತಿಕ ಸಾಫ್ಟ್‌ವೇರ್ ದೈತ್ಯ ಸಂಸ್ಥೆಯಾದ ಮೈಕ್ರೋಸಾಫ್ಟ್ ತನ್ನ ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಉದ್ಯೋಗಿಗಳಿಗೆ ದೊಡ್ಡ ಶಾಕ್ ನೀಡಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಶೇಕಡಾ 2.1 ರಷ್ಟು, ಅಂದರೆ ಸುಆರು 4,800 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ. ಮೈಕ್ರೋಸಾಫ್ಟ್‌ನ ಈ ದಿಢೀರ್ ನಿರ್ಧಾರದಿಂದ ಕಂಪನಿಯ ವಾಣಿಜ್ಯ ಮಾರಾಟ (Commercial Sales) ಹಾಗೂ ಎಕ್ಸ್‌ಬಾಕ್ಸ್ ಗೇಮಿಂಗ್ (Xbox Gaming) ವಿಭಾಗಗಳ ಮೇಲೆ ಹೆಚ್ಚಿನ ಮಟ್ಟದ ಪರಿಣಾಮ ಬೀರಿದೆ.

ಗೇಮಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ

ಮುಂದಿನ ಆರ್ಥಿಕ ವರ್ಷದಲ್ಲಿ ಗೇಮಿಂಗ್ ವಿಭಾಗವೊಂದರಲ್ಲೇ ಸುಮಾರು 3,200 ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಯೋಚನೆ ಮಾಡಿದೆಯಂತೆ. ಇದರೊಂದಿಗೆ ನಾಲ್ಕು ಪ್ರಮುಖ ಗೇಮ್ ಸ್ಟುಡಿಯೋಗಳನ್ನು ಸಂಪೂರ್ಣವಾಗಿ ಮುಚ್ಚಲು, ಇಲ್ಲವೇ ಬೇರೆ ಕಂಪನಿಗಳಿಗೆ ಮಾರಾಟ ಮಾಡಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಸದ್ಯ ಎಕ್ಸ್‌ಬಾಕ್ಸ್ ಗೇಮಿಂಗ್ ವಿಭಾಗವು ತೀವ್ರ ನಷ್ಟದಲ್ಲಿದ್ದು, ಮುಂಬರುವ ದಿನಗಳಲ್ಲಿ ಈ ವಿಭಾಗದಲ್ಲಿ ಮತ್ತಷ್ಟು ಉದ್ಯೋಗ ಕಡಿತ ಉಂಟಾಗುವ ಮುನ್ಸೂಚನೆಯನ್ನು ಕಂಪನಿ ನೀಡಿದೆ.

ಉದ್ಯೋಗ ಕಡಿತಕ್ಕೆ ಕಾರಣವೇನು?

ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ವಲಯದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು, ಹೂಡಿಕೆ ಹಾಗೂ ಕಂಪನಿಯ ಆದ್ಯತೆಗಳನ್ನು ಮರುಹೊಂದಿಸುವ ಭಾಗವಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಆಮಿ ಹುಡ್ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.

ಈ ಉದ್ಯೋಗ ಕಡಿತಕ್ಕೂ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಗೂ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ಕಂಪನಿ ಉಲ್ಲೇಖಿಸಿದೆ. ತಂತ್ರಜ್ಞಾನ ವಲಯದಲ್ಲಿನ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಆಂತರಿಕ ಪುನರ್ರಚನೆಯೇ ಈ ಲೇ-ಆಫ್‌ಗೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಈ ಉದ್ಯೋಗ ಕಡಿತದ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುವ ಸಾಧ್ಯತೆಗಳಿವೆ.

PREV
Read more Articles on
click me!

Recommended Stories

Google Employees: ವಾರ್ಷಿಕ 8 ಕೋಟಿ ಸಂಬಳ ಇದ್ರೂ ಗೂಗಲ್ ಕೆಲ್ಸ ಬಿಡ್ತಿದ್ದಾರೆ ಉದ್ಯೋಗಿಗಳು, ಇಂಟರೆಸ್ಟಿಂಗ್ ಆಗಿದೆ ಕಾರಣ
ಕೋರ್ಟ್ ಮೆಟ್ಟಿಲೇರಿದ್ದ 341 OBC ಶಿಕ್ಷಕಿಯರಿಗೆ ಕೊನೆಗೂ ಸಿಕ್ತು ಮುಕ್ತಿ!; ಷರತ್ತುಬದ್ಧ ಸೇರ್ಪಡೆಗೆ ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್!