22 ಸಾವಿರದಿಂದ 1.16 ಲಕ್ಷಕ್ಕೆ ಸಂಬಳ ಜಂಪ್! ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಹಳ್ಳಿ ಹೈದ

Published : Aug 10, 2026, 08:50 AM IST
Corporate

ಸಾರಾಂಶ

Success Story: ತಿಂಗಳಿಗೆ ಕೇವಲ ₹22,000 ಸಂಬಳದಿಂದ ವೃತ್ತಿ ಆರಂಭಿಸಿದ ಯುವಕನೊಬ್ಬ, ಕೇವಲ ಆರು ವರ್ಷಗಳಲ್ಲಿ ಸರ್ಕಾರಿ ಕಂಪನಿಯಲ್ಲಿ ₹1.16 ಲಕ್ಷ ಸಂಬಳದ ಹುದ್ದೆ ಪಡೆದ ಸ್ಫೂರ್ತಿದಾಯಕ ಕಥೆ ಇದಾಗಿದೆ.

Village Boy: ತಿಂಗಳಿಗೆ ಕೇವಲ 22,000 ರೂಪಾಯಿ ಸಂಬಳದಲ್ಲಿ ವೃತ್ತಿಜೀವನ ಆರಂಭಿಸಿದ್ದ ಯುವಕನೊಬ್ಬ, ಆರೇ ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರಲ್ಲಿ ದೊಡ್ಡ ಹುದ್ದೆ ಗಿಟ್ಟಿಸಿಕೊಂಡ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮಧ್ಯಪ್ರದೇಶದ ಒಂದು ಪುಟ್ಟ ಹಳ್ಳಿಯಿಂದ ಬಂದು ಗುರುಗ್ರಾಮದ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿ, ಕೊನೆಗೆ ಸರ್ಕಾರಿ ಹುದ್ದೆ ಪಡೆದ ತನ್ನ ಅನುಭವವನ್ನು ಈ ಯುವಕ ಹಂಚಿಕೊಂಡಿದ್ದಾನೆ.

ಬಿಕಾಂನಿಂದ ಮೊದಲ ಕೆಲಸಕ್ಕೆ

ದೆಹಲಿ ವಿಶ್ವವಿದ್ಯಾಲಯದಿಂದ ಬಿಕಾಂ ಮುಗಿಸಿದ ಈತನಿಗೆ, 20ನೇ ವಯಸ್ಸಲ್ಲೇ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಮೊದಲ ಕೆಲಸ ಸಿಕ್ಕಿತು. ವಾರ್ಷಿಕ 3.3 ಲಕ್ಷ ರೂಪಾಯಿ ಪ್ಯಾಕೇಜ್ ಇದ್ದರೂ, ಕೈಗೆ ಸಿಗುತ್ತಿದ್ದುದು ತಿಂಗಳಿಗೆ 22,000 ರೂಪಾಯಿ ಮಾತ್ರ. ಒಂದು ಸಣ್ಣ ಊರಿನಿಂದ ಗುರುಗ್ರಾಮಕ್ಕೆ ಬಂದು ಸ್ವಂತ ದುಡಿಮೆ ಶುರು ಮಾಡಿದ್ದು, ತನಗೆ ದೊಡ್ಡ ಸ್ವಾತಂತ್ರ್ಯದ ಭಾವನೆ ನೀಡಿತ್ತು ಎಂದು ಆತ ನೆನಪಿಸಿಕೊಳ್ಳುತ್ತಾನೆ.

ಹಿನ್ನಡೆ ಮತ್ತು ಮಹತ್ವದ ನಿರ್ಧಾರ

ಮ್ಯಾನೇಜ್‌ಮೆಂಟ್ ಪ್ರವೇಶ ಪರೀಕ್ಷೆಯಾದ 'ಕ್ಯಾಟ್' (CAT) ಬರೆದರೂ ಅದರಲ್ಲಿ ಫೇಲ್ ಆದ. ಇದರಿಂದ ಬೇಸತ್ತು ಕೆಲಸಕ್ಕೆ ರಾಜೀನಾಮೆ ನೀಡಿ, ಮಾಸ್ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿಗೆ ಸೇರಲು ನಿರ್ಧರಿಸಿದ. ಇದು ತನ್ನ ಕೆರಿಯರ್‌ನಲ್ಲೇ ತೆಗೆದುಕೊಂಡ ಅತ್ಯಂತ ರಿಸ್ಕಿ ನಿರ್ಧಾರವಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಆದರೆ, ಕೋವಿಡ್ ಸಮಯದಲ್ಲಿ, ಅಂದರೆ ತನ್ನ ಮೂರನೇ ಸೆಮಿಸ್ಟರ್ ಓದುತ್ತಿರುವಾಗಲೇ, ಪ್ರಸಿದ್ಧ 'ಬಿಗ್ 4' ಕಂಪನಿಯೊಂದರಲ್ಲಿ ವಾರ್ಷಿಕ 6.5 ಲಕ್ಷ ರೂಪಾಯಿ ಪ್ಯಾಕೇಜ್‌ನ ಕೆಲಸ ಸಿಕ್ಕಿತು. ಆಗ ಆತನ ತಿಂಗಳ ಸಂಬಳ 41,000 ರೂಪಾಯಿಗೆ ಏರಿತು.

ಕೋವಿಡ್ ಕಾಲದ ಕಠಿಣ ಪರಿಶ್ರಮ

ಕೆಲಸದ ಜೊತೆಜೊತೆಗೆ ಸರ್ಕಾರಿ ಹುದ್ದೆ ಪಡೆಯಲೇಬೇಕೆಂದು ಮತ್ತೆ ಓದು ಶುರುಮಾಡಿದ. ವರ್ಕ್ ಫ್ರಂ ಹೋಮ್ ಸೌಲಭ್ಯ ಸಿಕ್ಕಿದ್ದರಿಂದ, ಪರೀಕ್ಷಾ ತಯಾರಿಗೆ ಸಂಪೂರ್ಣವಾಗಿ ಗಮನ ಹರಿಸಲು ಸಾಧ್ಯವಾಯಿತು. ನಂತರ, 55,000 ರೂಪಾಯಿ ಸಂಬಳಕ್ಕೆ ಆಗ್ನೇಯ ಏಷ್ಯಾ ಮೂಲದ ಪಿಆರ್ ಕಂಪನಿಯೊಂದಕ್ಕೆ ಸೇರಿದ. ಇಲ್ಲಿ ಕೆಲಸ ಮಾಡುತ್ತಿರುವಾಗಲೇ, ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ನೇಮಕಾತಿ ಅಧಿಸೂಚನೆ ಕಣ್ಣಿಗೆ ಬಿತ್ತು.

ಕಠಿಣ ಪರಿಶ್ರಮದ ನಂತರ ಪರೀಕ್ಷೆ ಮತ್ತು ಸಂದರ್ಶನ ಎರಡನ್ನೂ ಪಾಸ್ ಮಾಡಿ, ಆತ ಸರ್ಕಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ. ಆರಂಭದಲ್ಲಿ ಭತ್ಯೆಗಳೆಲ್ಲಾ ಸೇರಿ 65,000 ರೂಪಾಯಿ ಸಂಬಳ ಸಿಗುತ್ತಿತ್ತು. ವಾರ್ಷಿಕ ಬಡ್ತಿ ಮತ್ತು ಪ್ರೊಮೋಶನ್‌ಗಳ ನಂತರ, ಈಗ ಆತನ ತಿಂಗಳ ಸಂಬಳ ಸುಮಾರು 1.16 ಲಕ್ಷ ರೂಪಾಯಿ ಆಗಿದೆ. ಈ ಯುವಕನ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾವಿರಾರು ಜನರು ಅಭಿನಂದನೆ ಸಲ್ಲಿಸಿದ್ದಾರೆ. ಐಟಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲೂ ಇಂತಹ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ನಿಮ್ಮ ಕಥೆಯೇ ದೊಡ್ಡ ಸ್ಫೂರ್ತಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

9ನೇ ತರಗತಿ ಓದಿದ್ದ ಕ್ಯಾಬ್ ಡ್ರೈವರ್‌ಗೆ ಟೆಕ್ಕಿ ಕೆಲಸ ಕೊಟ್ಟ ಮಾಲೀಕ; ಈಗ ಕಂಪನಿ ಒಂದು ವಿಭಾಗಕ್ಕೆ ಆಲ್ ಇಂಡಿಯಾ ಹೆಡ್!
ಒಬ್ಬ ಮಾಡಿದ ಎಡವಟ್ಟಿಗೆ ಇಡೀ ಟೀಮ್‌ಗೆ ಪನಿಶ್‌ಮೆಂಟ್: ಕೆಲವೇ ಗಂಟೆಗಳಲ್ಲಿ ವರ್ಕ್ ಫ್ರಮ್ ಆಫೀಸ್ ಕಡ್ಡಾಯ