
ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು UPSC ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IAS, IPS, IFS ಅಥವಾ IRS ಅಧಿಕಾರಿಯಾಗುವ ಕನಸು ಕಾಣುತ್ತಾರೆ. ಆದರೆ ಪರೀಕ್ಷೆಯ ತಯಾರಿಯ ಸಮಯದಲ್ಲಿ ಹೆಚ್ಚು ಕೇಳಲಾಗುವ ಪ್ರಶ್ನೆಯೆಂದರೆ, ಈ ನಾಲ್ಕು ಸೇವೆಗಳಲ್ಲಿ ಯಾರಿಗೆ ಹೆಚ್ಚು ಸಂಬಳ ಮತ್ತು ಸೌಲಭ್ಯಗಳು ಸಿಗುತ್ತವೆ? ಎಂಬುದು. ಆರಂಭದಲ್ಲಿ ಈ ನಾಲ್ಕು ಸೇವೆಗಳ ಅಧಿಕಾರಿಗಳ ವೇತನ ಬಹುತೇಕ ಒಂದೇ ರೀತಿಯಾಗಿರುತ್ತದೆ. ಆದರೆ ಅನುಭವ ಮತ್ತು ಬಡ್ತಿ ಹೆಚ್ಚಾದಂತೆ ವೇತನ, ಜವಾಬ್ದಾರಿ ಹಾಗೂ ಸೌಲಭ್ಯಗಳಲ್ಲಿ ದೊಡ್ಡ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಹಾಗಾದರೆ IAS, IPS, IFS ಮತ್ತು IRS ಸೇವೆಗಳಲ್ಲಿ ವೇತನ ಹಾಗೂ ಸೌಲಭ್ಯಗಳ ವಿಚಾರದಲ್ಲಿ ಯಾರು ಮುಂದಿದ್ದಾರೆ ಎಂಬುದನ್ನು ನೋಡೋಣ.
ಈ ನಾಲ್ಕು ಸೇವೆಗಳ ಅಧಿಕಾರಿಗಳ ಆರಂಭಿಕ ವೇತನ ಬಹುತೇಕ ಒಂದೇ ಆಗಿರುತ್ತದೆ. 7ನೇ ವೇತನ ಆಯೋಗದ ಪ್ರಕಾರ IAS, IPS, IFS ಮತ್ತು IRS ಅಧಿಕಾರಿಗಳ ಆರಂಭಿಕ ಮೂಲ ವೇತನ ಪೇ ಲೆವೆಲ್-10ರಲ್ಲಿ ತಿಂಗಳಿಗೆ ₹56,100ರಿಂದ ಆರಂಭವಾಗುತ್ತದೆ. ಇದರ ಜೊತೆಗೆ DA, HRA ಸೇರಿದಂತೆ ಇತರ ಭತ್ಯೆಗಳೂ ದೊರೆಯುತ್ತವೆ. ಆದರೆ ವೃತ್ತಿಜೀವನದಲ್ಲಿ ಮುಂದೆ ಸಾಗಿದಂತೆ ಅಧಿಕಾರಿಗಳ ವೇತನ ಮತ್ತು ಸೌಲಭ್ಯಗಳಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳಲು ಆರಂಭವಾಗುತ್ತದೆ.
IAS – ಅತಿ ಹೆಚ್ಚು ಮೂಲ ವೇತನ
IAS ಅಧಿಕಾರಿಗಳಿಗೆ ಬಡ್ತಿಯೊಂದಿಗೆ ವೇತನ ಹೆಚ್ಚಳದ ಪ್ರಯೋಜನ ದೊರೆಯುತ್ತದೆ. ಅವರು ದೇಶದ ಅತ್ಯುನ್ನತ ಆಡಳಿತಾತ್ಮಕ ಹುದ್ದೆಯಾದ ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆಯವರೆಗೆ ಏರಬಹುದು. ಈ ಹುದ್ದೆಯಲ್ಲಿ ಮೂಲ ವೇತನ ತಿಂಗಳಿಗೆ ₹2.50 ಲಕ್ಷದವರೆಗೆ ತಲುಪಬಹುದು. ಈ ನಾಲ್ಕು ಸೇವೆಗಳಲ್ಲಿ ಅತ್ಯಧಿಕ ಮೂಲ ವೇತನ ಇದಾಗಿದೆ.
IPS – ಭದ್ರತೆ ಮತ್ತು ವಿಶೇಷ ಸೌಲಭ್ಯಗಳ ಪ್ರಯೋಜನ
IPS ಅಧಿಕಾರಿಗಳಿಗೂ ವೃತ್ತಿಜೀವನದಲ್ಲಿ ಉತ್ತಮ ವೇತನ ಹೆಚ್ಚಳ ದೊರೆಯುತ್ತದೆ. ಅವರ ಗರಿಷ್ಠ ವೇತನ ಸಾಮಾನ್ಯವಾಗಿ ತಿಂಗಳಿಗೆ ಸುಮಾರು ₹2.25 ಲಕ್ಷದವರೆಗೆ ಇರಬಹುದು. ಇದರ ಜೊತೆಗೆ ಭದ್ರತೆ, ಸರ್ಕಾರಿ ವಾಹನ, ಭದ್ರತಾ ಸಿಬ್ಬಂದಿ ಮತ್ತು ಇತರ ಆಡಳಿತಾತ್ಮಕ ಸೌಲಭ್ಯಗಳು ದೊರೆಯುತ್ತವೆ. ಈ ವಿಶೇಷ ಸೌಲಭ್ಯಗಳು IPS ಸೇವೆಯನ್ನು ಇತರ ಸೇವೆಗಳಿಂದ ವಿಭಿನ್ನವಾಗಿಸುತ್ತವೆ.
IFS – ವಿದೇಶಿ ನಿಯೋಜನೆಯಿಂದ ಹೆಚ್ಚಾಗುವ ಆದಾಯ
IFS ಅಂದರೆ Indian Foreign Service. ಈ ಅಧಿಕಾರಿಗಳ ಆರಂಭಿಕ ವೇತನವೂ ಇತರ ಸೇವೆಗಳ ಅಧಿಕಾರಿಗಳಂತೆಯೇ ಇರುತ್ತದೆ. ಆದರೆ ವಿದೇಶದಲ್ಲಿ ನಿಯೋಜನೆಯಾದ ಸಂದರ್ಭದಲ್ಲಿ ಅವರಿಗೆ ವಿದೇಶಿ ಭತ್ಯೆ ಮತ್ತು ಹಲವು ವಿಶೇಷ ಸೌಲಭ್ಯಗಳು ದೊರೆಯುತ್ತವೆ. ಕೆಲವು ಸಂದರ್ಭಗಳಲ್ಲಿ ಅವರ ಒಟ್ಟು ಆದಾಯ ಇತರ ಸೇವೆಗಳಿಗಿಂತ ಗಣನೀಯವಾಗಿ ಹೆಚ್ಚಾಗಬಹುದು. ವಸತಿ, ಮಕ್ಕಳ ಶಿಕ್ಷಣ ಮತ್ತು ವಿದೇಶದಲ್ಲಿ ವಾಸಿಸಲು ಸಂಬಂಧಿಸಿದ ಹಲವು ಖರ್ಚುಗಳನ್ನು ಸರ್ಕಾರವೇ ಭರಿಸುತ್ತದೆ.
IRS – ಆದಾಯ ತೆರಿಗೆ ಮತ್ತು ತೆರಿಗೆ ಆಡಳಿತದ ಪ್ರಮುಖ ಜವಾಬ್ದಾರಿ
IRS ಅಂದರೆ Indian Revenue Service. ಈ ಸೇವೆಯ ಅಧಿಕಾರಿಗಳ ಆರಂಭಿಕ ವೇತನವೂ ಇತರ ಸೇವೆಗಳಷ್ಟೇ ಇರುತ್ತದೆ. IRS ಅಧಿಕಾರಿಗಳು ಆದಾಯ ತೆರಿಗೆ ಮತ್ತು ಪರೋಕ್ಷ ತೆರಿಗೆ ಆಡಳಿತಕ್ಕೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಬಡ್ತಿಯೊಂದಿಗೆ IRS ಅಧಿಕಾರಿಗಳ ವೇತನವೂ ತಿಂಗಳಿಗೆ ಸುಮಾರು ₹2.25 ಲಕ್ಷದವರೆಗೆ ತಲುಪಬಹುದು.
ಹಾಗಿದ್ರೆ ಯಾರ ಸಂಬಳ ಹೆಚ್ಚು?
ಕೇವಲ ಗರಿಷ್ಠ ಮೂಲ ವೇತನವನ್ನು ಪರಿಗಣಿಸಿದರೆ IAS ಅಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ, ವಿದೇಶಿ ನಿಯೋಜನೆ ಮತ್ತು ಅಂತರರಾಷ್ಟ್ರೀಯ ಸೌಲಭ್ಯಗಳನ್ನು ಪರಿಗಣಿಸಿದರೆ IFS ಅಧಿಕಾರಿಗಳಿಗೆ ವಿಶೇಷ ಪ್ರಯೋಜನಗಳಿವೆ. ಇನ್ನು IPS ಮತ್ತು IRS ಅಧಿಕಾರಿಗಳಿಗೂ ಉತ್ತಮ ವೇತನ, ಪ್ರತಿಷ್ಠೆ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಹೀಗಾಗಿ ನಾಲ್ಕೂ ಸೇವೆಗಳು ತಮ್ಮದೇ ಆದ ವಿಶೇಷತೆ ಮತ್ತು ಪ್ರಯೋಜನಗಳನ್ನು ಹೊಂದಿವೆ.