'ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನೀತಿ ಜಾರಿ'

By Suvarna NewsFirst Published Feb 13, 2020, 7:44 PM IST
Highlights

ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಲು ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಿ ಅನೇಕ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಗದಗ, (ಫೆ.13): ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಶಿಫಾರಸು ಮಾಡಿರುವ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಬಗ್ಗೆ ತಾತ್ವಿಕವಾಗಿ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಎಂದು ಗೃಹ‌ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು (ಗುರುವಾರ) ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಬಂದ್: ಸರೋಜಿನಿ ಮಹಿಷಿ ವರದಿಯಲ್ಲೇನಿದೆ?, ಕನ್ನಡಿಗರಿಗೇನು ಲಾಭ?

ಹಲವಾರು ವರ್ಷಗಳಿಂದ ವರದಿಯ ಎಲ್ಲಾ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಪ್ರಯತ್ನ ನಡೆಯುತ್ತಿವೆ. ಆದರೆ ಕೆಲವೊಂದು ತೊಡಕುಗಳಿದ್ದು, ಅವುಗಳನ್ನು ನಿವಾರಿಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದರು.

ಈಗಾಗಲೇ ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ವರದಿಯ ಎಲ್ಲಾ ಪ್ರಮುಖ ಅಂಶಗಳನ್ನು ಜಾರಿ ಮಾಡಿ ಕನ್ನಡಿಗರಿಗೆ ಉದ್ಯೋಗ ಕೊಡುವ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಆಶ್ವಾಸನೆ ನೀಡಿದರು.

ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಲು ಶಿಫಾರಸು ಮಾಡಿರುವ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕಾಗಿ ಇಂದು (ಗುರುವಾರ) ಅನೇಕ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಆದ್ರೆ, ಅದು ವಿಫಲವಾಗಿದೆ.

ಯಾಕಂದ್ರೆ, ಬೆರಳೆಣಿಕೆಯಷ್ಟು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದವು. ಬಹುತೇಕ ಸಂಘಟನೆಗಳು ಬಂದ್ ನಿಂದ ಅಂತರ ಕಾಯ್ದುಕೊಂಡಿದ್ದವು. 

ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಪಾಠ ಪ್ರವಚನ ಎಂದಿನಂತೆ ನಡೆದ್ರೆ, ವ್ಯಾಪಾರ-ವಹಿವಾಟು, ಸಾರಿಗೆ ಸಂಚಾರ, ಜನಜೀವನ ಯಥಾಸ್ಥಿತಿಯಲ್ಲಿತ್ತು.. ಆದ್ದರಿಂದ ಎಲ್ಲೂ ಕೂಡ ಜನತೆಗೆ ಕರ್ನಾಟಕ ಬಂದ್ ಬಿಸಿ ತಟ್ಟಲೇ ಇಲ್ಲ.

ಖಾಸಗಿ ಸಂಸ್ಥೆಗಳಲ್ಲಿ ಶೇ. 25ರಷ್ಟು ಉದ್ಯೋಗ
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿದ್ದರಿಂದ. ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಅಂದಿನ ಸಂಸದೆ ಸರೋಜಿನಿ ಮಹಷಿಯವರಿಗೆ ಸೂಚಿಸಿತು. ಮಹಿಷಿಯವರು ಒಂದು ವರ್ಷ ಕ್ಷೇತ್ರ ಪ್ರವಾಸ, ಅಧ್ಯಯನ ಮಾಡಿ ಸರ್ಕಾರಕ್ಕೆ 1983 ರಲ್ಲಿ ವರದಿ ನೀಡಿದ್ದರು. ಅದು ಮಹಿಷಿ ವರದಿ ಎಂದೇ ಖ್ಯಾತವಾಯಿತು. ಕರ್ನಾಟಕದಲ್ಲಿ ಖಾಸಗಿ ಸಂಸ್ಥೆಗಳು ಶೇ. 25 ರಷ್ಟು, ಇನ್ನು ಸರ್ಕಾರಿ ವಲಯದಲ್ಲಿ ಶೇ.90 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ಮೀಸಲು ಇಡಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. 

click me!