ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 16,838 ಹುದ್ದೆಗಳನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.
ಬೆಂಗಳೂರು [ಜು.20] : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 16,838 ಹುದ್ದೆಗಳನ್ನು ಈ ವರ್ಷದ ಅಂತ್ಯದೊಳಗೆ ಭರ್ತಿ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಹಾಗೂ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಸರ್ಕಾರಿ ವಕೀಲ ಡಿ.ನಾಗರಾಜ್ ಮೆಮೊ ಸಲ್ಲಿಸಿ, ಗೃಹ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯ ಪೊಲೀಸ್ ಇಲಾಖೆಗೆ ಒಟ್ಟು 65,214 ಹುದ್ದೆಗಳು ಮಂಜೂರಾಗಿವೆ. ಆ ಪೈಕಿ 48,376 ಹುದ್ದೆಗಳು ಭರ್ತಿಯಾಗಿದ್ದು, 16,838 ಹುದ್ದೆಗಳು ಖಾಲಿಯಿವೆ. ಖಾಲಿಯಿರುವ ಹುದ್ದೆಗಳಲ್ಲಿ 9146 ಪೊಲೀಸ್ ಪೇದೆಗಳ ಶ್ರೇಣಿಯದ್ದಾಗಿದೆ, 2014-15ರಿಂದ 2017-18 ರವರೆಗೆ 1,676 ಸಬ್ ಇನ್ಸ್‌ಪೆಕ್ಟರ್ ಮತ್ತು 30,117 ಪೊಲೀಸ್ ಪೇದೆಗಳನ್ನು ನೇಮಿಸಲಾಗಿದೆ. 2018-19ನೇ ಸಾಲಿನಲ್ಲಿ 346 ಸಬ್ ಇನ್ಸ್‌ಪೆಕ್ಟರ್ ಮತ್ತು 5,185 ಪೊಲೀಸ್ ಪೇದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.
undefined
ಜತೆಗೆ, ಸರ್ಕಾರ ಸಹ ಹೆಚ್ಚುವರಿಯಾಗಿ 877 ಸಬ್ ಇನ್ಸ್‌ಪೆಕ್ಟರ್ ಮತ್ತು 8,000 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಸೃಷ್ಟಿಮಾಡಿದೆ. ಸದ್ಯ ಖಾಲಿಯಿರುವ ಹುದ್ದೆಗಳನ್ನು ಮತ್ತು 2018-22ರ ಅವಧಿಯಲ್ಲಿ ನಿವೃತ್ತರಾಗಲಿರುವವರ ಹುದ್ದೆಗಳನ್ನು ಗಮನಿಸಿ 1,223 ಸಬ್ ಇನ್ಸ್‌ಪೆಕ್ಟರ್ ಮತ್ತು 13,185 ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳನ್ನು ತುಂಬಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ವಕೀಲರು ವಿವರಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಸದ್ಯ ರಾಜ್ಯದಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ಎಷ್ಟುಪೊಲೀಸರ ಅವಶ್ಯಕತೆ ಇದೆ ಎಂಬ ವಿಷಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 16,838 ಹುದ್ದೆಗಳನ್ನು ಈ ವರ್ಷಾಂತ್ಯದೊಳಗೆ ಭರ್ತಿ ಮಾಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.