10 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿದ ಸಿಎಂ

By Kannadaprabha News  |  First Published Dec 26, 2022, 1:52 PM IST

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ ’ಸುಶಾಸನ ದಿನಾಚರಣೆ’ಯ ಭಾಗವಾಗಿ ಒಟ್ಟು 10 ಸಾವಿರ ಯುವಜನರಿಗೆ ಉದ್ಯೋಗಪತ್ರಗಳನ್ನು ವಿತರಿಸಿದ ಸಿಎಂ ಬಸವರಾಜ ಬೊಮ್ಮಾಯಿ.


ಬೆಂಗಳೂರು (ಡಿ.26) : ಇಲೆಕ್ಟ್ರಿಕ್‌ ವಾಹನ (ಇವಿ) ಕ್ಷೇತ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಬೆಂಗಳೂರು ಹೊಂದಿದೆ. ಅತಿ ಹೆಚ್ಚು ಇವಿ ಬೆಂಗಳೂರಿನಲ್ಲಿ ಮಾರಾಟವಾಗುತ್ತಿವೆ. ಆದರೆ ಇಲೆಕ್ಟ್ರಾನಿಕ್‌ ವಾಹನಗಳ ಉತ್ಪಾದನೆ ಬೇರೆ ರಾಜ್ಯದಲ್ಲಿ ಆಗುತ್ತಿದೆ. ಆದುದರಿಂದ ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಹೊಂದಿರುವ ಕಂಪೆನಿಗಳು ರಾಜ್ಯದಲ್ಲೇ ಉತ್ಪಾದನಾ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದ ’ಸುಶಾಸನ ದಿನಾಚರಣೆ’ಯ ಭಾಗವಾಗಿ ಒಟ್ಟು 10 ಸಾವಿರ ಯುವಜನರಿಗೆ ಉದ್ಯೋಗಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

Tap to resize

Latest Videos

ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಆತಂಕ ಬೇಡ: ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯಕ್ಕೆ ಇತ್ತೀಚೆಗೆ ನಡೆದ ಹೂಡಿಕೆದಾರರ ಸಮಾವೇಶದಿಂದ 8 ಲಕ್ಷ ಕೋಟಿ ರೂ. ಹೂಡಿಕೆ ಬರುವ ನಿರೀಕ್ಷೆಯಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಕೌಶಲ್ಯಾಭಿವೃದ್ಧಿ ನಿರ್ಣಾಯಕವಾಗಿದೆ. ಉತ್ತಮ ಕೌಶಲ್ಯವಿದ್ದರೆ ಉತ್ತಮ ಸಂಬಳ ಮತ್ತು ಜೀವನ ಸಾಧ್ಯ. ಹೀಗಾಗಿ ಐಟಿಐ, ಜಿಟಿಡಿಸಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳೆಲ್ಲವನ್ನೂ ಕೌಶಲ್ಯದ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಮಂತ್ರಿಗಳ ಸ್ಕಿಲ್‌ ಇಂಡಿಯಾ ಮತ್ತು ದೀನ್‌ ದಯಾಳ್‌ ಉಪಾಧ್ಯಾಯ ಕೌಶಲ್ಯ ಯೋಜನೆಗಳಡಿ ಯುವಜನರನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮತ್ತು ಉದ್ಯೋಗದಾತರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕವನ್ನು ಬಿಟ್ಟರೆ ಬೇರೆ ಯಾವುದೇ ರಾಜ್ಯದಲ್ಲಿ ಉದ್ಯೋಗ ನೀತಿ ಇಲ್ಲ. ಇದಕ್ಕೆ ಪೂರಕವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನೂ ತರಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಗಬೇಕೆನ್ನುವುದು ಸರ್ಕಾರದ ಗುರಿಯಾಗಿದೆ. ಯುವ ಜನರಲ್ಲಿ ಕೌಶಲ್ಯ ತುಂಬಲು ಸರ್ಕಾರ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು.

ಐಟಿ ಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ಈ ವರ್ಷದಿಂದ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ವೃತ್ತಿ ತರಬೇತಿ ಪದವಿಯನ್ನು (ಬಿ.ವೋಕ್‌) ಪ್ರಾರಂಭಿಸಲಾಗುವುದು. ಇದಕ್ಕಾಗಿ ಜಿಟಿಟಿಸಿ ಮತ್ತು ವಿವಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸ್ಕಿಲ್‌ ಕನೆಕ್ಟ್ ಪೋರ್ಟಲ್‌ ಮುಖಾಂತರ ವಿದ್ಯಾರ್ಥಿಗಳ ಆಸಕ್ತಿಗಳು ಇತ್ಯಾದಿಗಳನ್ನು ಗಮನಿಸಿ, ಸೂಕ್ತ ಕೌಶಲ್ಯಾಭಿವೃದ್ಧಿ ಒದಗಿಸಲಾಗುವುದು. ಈ ವರ್ಷ 30 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಿಟಿಟಿಸಿಗಳಲ್ಲಿ ಈಗಾಗಲೇ ಅಲ್ಪಾವಧಿಯ 10 ಮತ್ತು ದೀಘಾವಧಿಯ 30 ಹೊಸ ಕೋರ್ಸುಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿರುವ ಉದ್ಯೋಗಾವಕಾಶಗಳು ನಮ್ಮ ಯುವಜನರಿಗೆ ಸಿಗಬೇಕು ಎಂಬುದು ನಮ್ಮ ಗುರಿ ಎಂದು ಅವರು ಪ್ರತಿಪಾದಿಸಿದರು.

ಶೀಘ್ರ ವರದಿ ಸಲ್ಲಿಕೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ: ಸಿಎಂ ಬೊಮ್ಮಾಯಿ

ಇದೇ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಬೋಧಕೇತರ ಸಿಬ್ಬಂದಿಗಳ ಕುಂದುಕೊರತೆ ನಿವಾರಣೆಗೆ ರೂಪಿಸಿರುವ ’ಶಿಕ್ಷಣ ಸ್ಪಂದನ’ ಉಪಕ್ರಮ ಮತ್ತು ಜಿಟಿಟಿಸಿ ಪುನಾರಚನೆ ವರದಿಗಳನ್ನು ಬಿಡುಗಡೆ ಮಾಡಲಾಯಿತು.

click me!