ಚಿತ್ರದುರ್ಗದಲ್ಲಿ ವಕೀಲರೋರ್ವರು ತನ್ನ ಮದುವೆ ಪತ್ರಿಕೆಯನ್ನು 150 ಪುಟಗಳಷ್ಟು ಮುದ್ರಣ ಮಾಡಿದ್ದಾರೆ.
ಚಿತ್ರದುರ್ಗ : ಏನ್ ವಕೀಲ್ರೆ ತಮ್ದು ಮದುವೆ ಅಂತ ಗೊತ್ತಾತು. ಲಗ್ನ ಪತ್ರಿಕೆ ಕೊಡೋಕೆ ಮನೆ ಕಡೆ ಯಾವಾಗ ಬರ್ತೀರಾ, ನೀವು ಬಂದಾಗ ನಾವಿಲ್ಲದಿದ್ರೂ ಮರೆಯದೆ ಕೊಟ್ಟು ಹೋಗ್ರಪ್ಪ...!
ಜಿಲ್ಲೆಯ ಹಿರಿಯೂರಿನ ವಕೀಲರೊಬ್ಬರ ಲಗ್ನ ಪತ್ರಿಕೆಗೆ ಉಂಟಾಗಿರುವ ಡಿಮ್ಯಾಂಡ್ ಇದು. ಬರೋಬ್ಬರಿ 150 ಪುಟಗಳ ಲಗ್ನ ಪತ್ರಿಕೆ ಇದಾಗಿದ್ದು 70 ಸಾವಿರ ಖರ್ಚು ಮಾಡಿ ಎರಡು ಸಾವಿರ ಪ್ರತಿ ಮುದ್ರಿಸಿದ್ದಾರೆ. ಬೇಗನೆ ಹಾಳಾಗದ ಗ್ಲೇಜ್ಡ್ ಹಾಳೆ ಬಳಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆಗಳು ಮದುವೆ ಮುಗಿದ ತಕ್ಷಣ ಕಸದಬುಟ್ಟಿ ಸೇರುತ್ತವೆ.
ಅವುಗಳನ್ನಾರೂ ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಆದರೆ ಈ ಲಗ್ನ ಪತ್ರಿಕೆ ಬೇರೆಯದೇ ಸ್ವರೂಪ ಪಡೆದಿದೆ. ದಶಕಗಳ ಕಾಲ ಜೋಪಾನವಾಗಿ ಪ್ರತಿಯೊಬ್ಬರು ಕಾಯ್ದಿಡುವಷ್ಟರ ಮಟ್ಟಿಗೆ ಅದು ತನ್ನ ಗುಣಾತ್ಮಕತೆ ಮೆರೆದಿದೆ. ಲಗ್ನ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗಿದೆ. 148 ಪುಟಗಳಲ್ಲಿ ಉದ್ಯೋಗ ಮಾಹಿತಿ ಇದೆ.