
ಬೆಂಗಳೂರು: ಒಳ್ಳೆ ಸಂಬಳ, ದೊಡ್ಡ ಹುದ್ದೆ ಸಿಕ್ಕರೆ ಸಾಕು, ಅಮೆರಿಕಾಕ್ಕೆ ಹಾರಿಬಿಡಬೇಕು ಅಂತ ಬಹುತೇಕ ಐಟಿ ಮಂದಿ ಕನಸು ಕಾಣುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬರು, ತನ್ನ ಕಂಪನಿಯೇ ಕೊಟ್ಟ ಯುಎಸ್ ಟ್ರಾನ್ಸ್‌ಫರ್ ಆಫರ್‌ಗೆ ಬೇಡ ಅಂತ ಹೇಳಿ ಸುದ್ದಿಯಾಗಿದ್ದಾರೆ.
ಹೌದು, ನಾನೇನಾದರೂ ಕೆಲಸದ ನಿಮಿತ್ತ ಅಮೆರಿಕಾಗೆ ಹೋದರೆ, ತಾನು ವಾಸವಿರುವ ಮನೆ ಕೆಲಸವನ್ನೆಲ್ಲಾ ತಾನೇ ಮಾಡ್ಕೋಬೇಕಾಗುತ್ತದೆ. ಹೀಗಾಗಿ ಮನೆ ಕೆಲಸ ಮಾಡಿಕೊಳ್ಳಬೇಕಾಗುತ್ತದೆ ಎಂಬ ಭಯವೇ ಈ ಯುವಕ ಲಕ್ಷಗಟ್ಟಲೆ ಸಂಬಳದ ಆಫರ್ ತಿರಸ್ಕರಿಸಲು ಮುಖ್ಯ ಕಾರಣ. 'Zymrat' ಬ್ರ್ಯಾಂಡ್‌ನ ಸಹ-ಸಂಸ್ಥಾಪಕ ಉಜ್ವಲ್ ಅಸ್ತಾನಾ, ತಮ್ಮ ಸಂಬಂಧಿಕರೊಬ್ಬರ ಈ ವಿಚಿತ್ರ ನಿರ್ಧಾರದ ಬಗ್ಗೆ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಬರೆದುಕೊಂಡಿದ್ದು, ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉಜ್ವಲ್ ಅಸ್ತಾನಾ ಅವರ ಸಂಬಂಧಿಕರಿಗೆ, ಅವರು ಕೆಲಸ ಮಾಡುವ ಕಂಪನಿಯೇ ಯುಎಸ್‌ಗೆ ವರ್ಗಾವಣೆ ಆಗುವ ಅವಕಾಶ ನೀಡಿತ್ತು. ಆದರೆ, ಅಲ್ಲಿ ಸಿಗುವ ಸಂಬಳಕ್ಕೆ ಹೋಲಿಸಿದರೆ ಜೀವನ ನಿರ್ವಹಣೆ ದುಬಾರಿ ಮತ್ತು ಸೌಲಭ್ಯಗಳು ಕಡಿಮೆ ಎಂಬುದು ಆ ಯುವಕನ ವಾದವಾಗಿತ್ತು. ‘ನನ್ನ ಸಂಬಂಧಿಕರೊಬ್ಬರು ತಮ್ಮ ಕಂಪನಿ ನೀಡಿದ ಯುಎಸ್ ಅವಕಾಶವನ್ನು ನಿರಾಕರಿಸಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣ ಹೀಗಿದೆ – ಅಲ್ಲಿ ಕೊಡುವ ಸಂಬಳದಲ್ಲಿ ನಾನೇ ಮನೆ ಕ್ಲೀನ್ ಮಾಡ್ಕೋಬೇಕು, ಅಡುಗೆ ಮಾಡ್ಕೋಬೇಕು. ಇಲ್ಲಿನ ಹಾಗೆ 10 ನಿಮಿಷದಲ್ಲಿ ದಿನಸಿ ವಸ್ತುಗಳ ಡೆಲಿವರಿ ಸಿಗಲ್ಲ, ಮನೆಗೆ ಬಂದು ಮಸಾಜ್ ಮಾಡುವವರೂ ಇರಲ್ಲ. ಇಂಡಿಯಾದಲ್ಲಿ ಅವರು ಸಿಂಗಲ್ ಆಗಿದ್ದರೂ, ರಾಜನಂತೆ ಬದುಕುತ್ತಿದ್ದಾರೆ,’ ಎಂದು ಅಸ್ತಾನಾ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಜೋರಾಗಿವೆ. ಯುವಕನ ನಿರ್ಧಾರವನ್ನು ಅನೇಕರು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಇದನ್ನು ತಪ್ಪು ನಿರ್ಧಾರ ಎಂದಿದ್ದಾರೆ. 'ಭಾರತದಲ್ಲಿ ಬದುಕುವುದೇ ಹೆಚ್ಚು ಲಾಭದಾಯಕ. ಅಮೆರಿಕಾದಲ್ಲಿ ಪಿಪಿಪಿ (Purchasing Power Parity - ಕೊಳ್ಳುವ ಸಾಮರ್ಥ್ಯದ ಸಮಾನತೆ) ಲೆಕ್ಕಾಚಾರದಲ್ಲಿ ನೋಡಿದರೆ ದೊಡ್ಡ ಉಳಿತಾಯವೇನೂ ಮಾಡಲು ಸಾಧ್ಯವಿಲ್ಲ. ಹಾಲು, ಪೇಪರ್, ತರಕಾರಿ, ಟೈಲರ್, ಮನೆಗೆಲಸದವರು... ಎಲ್ಲರೂ ಕೈಗೆಟಕುವ ದೂರದಲ್ಲಿರುವ ಭಾರತವೇ ಸ್ವರ್ಗ,' ಎಂದು ಕೆಲವರು ವಾದಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ‘ಇದು ತಪ್ಪು ನಿರ್ಧಾರ. ಅಮೆರಿಕಾದಲ್ಲಿ ಗ್ರೀನ್ ಕಾರ್ಡ್ ಮತ್ತು ಪಿಆರ್ (PR) ಸಿಗುವಷ್ಟರಲ್ಲಿ ಮನೆಗೆಲಸ ಮಾಡಲು ರೋಬೋಟ್‌ಗಳು ಬಂದಿರುತ್ತವೆ. ಸ್ವಲ್ಪ ಕಾಲವಾದರೂ ವಿದೇಶದಲ್ಲಿ ಬದುಕುವುದು ವ್ಯಕ್ತಿತ್ವ ವಿಕಸನಕ್ಕೆ ಮತ್ತು ಬೇರೆ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ’ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.