
ನವದೆಹಲಿ: ಬ್ಯಾಂಕ್ ಸಿಬ್ಬಂದಿಗೆ ಸ್ಥಳಿಯ ಭಾಷೆ ಬರಬೇಕು ಎಂಬ ಕನ್ನಡಿಗರ ಹೋರಾಟಕ್ಕೆ ಜಯ ಸಂದಿದ್ದು, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಕನ್ನಡಿಗರಿಗೂ ಮಹತ್ವದ ಸುದ್ದಿ ಲಭಿಸಿದೆ. ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಗಳನ್ನು ಮಾತನಾಡಬಲ್ಲ 2,482 ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಬ್ಯಾಂಕ್ ಆಫ್ ಬರೋಡಾ (ಬಿಒಬಿ) ನಿರ್ಧರಿಸಿದೆ.
ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಸ್ಥಳೀಯ ಭಾಷೆಗಳನ್ನು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ ಹಾಗೂ ಆಕ್ರೋಶ ಹೆಚ್ಚುತ್ತಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ.
ಹುದ್ದೆಗೆ ಅರ್ಜಿ ಹಾಕಲು ಸೆ.7 ಕೊನೆಯ ದಿನವಾಗಿದೆ. ನೇಮಕವಾದವರನ್ನು ಜೂನಿಯರ್ ಮ್ಯಾನೇಜ್‌ಮೆಂಟ್ ದರ್ಜೆಯಲ್ಲಿ ‘ಸ್ಥಳೀಯ ಬ್ಯಾಂಕ್ ಅಧಿಕಾರಿಗಳು’ ಎಂದು ನೇಮಿಸಲಾಗುವುದು. ಈ ಉದ್ಯೋಗಗಳಿಗೆ ಸೇರುವ ಅಭ್ಯರ್ಥಿಗಳು ಮೊದಲ 12 ವರ್ಷಗಳ ಕಾಲ ಅವರು ಕೆಲಸಕ್ಕೆ ಆಯ್ಕೆಯಾದ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ ಅಥವಾ ಬ್ಯಾಂಕಿನಲ್ಲಿ ಒಂದು ನಿರ್ದಿಷ್ಟ ಮಟ್ಟಕ್ಕೆ ಬಡ್ತಿ ಪಡೆಯುವವರೆಗೆ ಅದೇ ರಾಜ್ಯದಲ್ಲಿ ಉಳಿಯಲು ಅವಕಾಶವಿದೆ.
ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರವರೆಗೆ ಬ್ಯಾಂಕಿನ ವೆಬ್ ಮೂಲಕ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೆಪ್ಟೆಂಬರ್ 1, 2026ಕ್ಕೆ 21ರಿಂದ 30 ವರ್ಷ ವಯಸ್ಸಿನವರಾಗಿರಬೇಕು ಮತ್ತು ಮಾನ್ಯತೆ ಪಡೆದ ವಿವಿಯಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 1 ವರ್ಷ ಅನುಭವವೂ ಅಪೇಕ್ಷಣೀಯವಾಗಿದೆ.
ಅಭ್ಯ ರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆ ಓದುವುದು, ಬರೆಯುವುದು ಮತ್ತು ಮಾತನಾಡುವುದರಲ್ಲಿ ನಿರರ್ಗಳವಾಗಿರಬೇಕು ಎಂದು ಬ್ಯಾಂಕ್ ಹೇಳಿದೆ.
ಇದನ್ನೂ ಓದಿ: ಮಗಳ ಸ್ಕೂಲ್ ಫೀಸ್‌ಗಾಗಿ ತಾಯಿ ಸಾಹಸ, ಸೀರೆಯುಟ್ಟು ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ಅಮ್ಮ