46 ಲಕ್ಷ ರೂ ಸಂಬಳದ ಕೆಲಸ ಬಿಟ್ಟ ಇಂಜಿನಿಯರ್; ಕಾರಣ ಗೊತ್ತಾದ್ರೆ ಸೆಲ್ಯೂಟ್ ಹೊಡೀತಿರಿ

Published : Sep 06, 2026, 08:58 PM IST
shardendu tiwari

ಸಾರಾಂಶ

ಅಮೆಜಾನ್ ಕಂಪನಿಯಲ್ಲಿ ವಾರ್ಷಿಕ 46 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು, ದೇಶ ಸೇವೆಗಾಗಿ ಭಾರತೀಯ ಸೇನೆಗೆ ಸೇರಿದ ಲಕ್ನೋದ ಎಂಜಿನಿಯರ್ ಶಾರ್ದೇಂದು ತಿವಾರಿ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ. ಸತತ ಎಂಟು ಬಾರಿ ವಿಫಲವಾದರೂ ಛಲ ಬಿಡದೆ ಒಂಬತ್ತನೇ ಪ್ರಯತ್ನದಲ್ಲಿ ಯಶಸ್ವಿಯಾದ ಇವರು, ಇದೀಗ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಅಧಿಕಾರಿಯಾಗಿ ದೇಶ ಸೇವೆಗೆ ಸಜ್ಜಾಗಿದ್ದಾರೆ.

ಲಕ್ನೋ: ಇಂದಿನ ಕಾಲದಲ್ಲಿ ಜಾಗತಿಕ ಟೆಕ್ ದೈತ್ಯ ಅಮೆಜಾನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುವುದು ಎಂದರೆ ಅದು ದೊಡ್ಡ ಸಾಧನೆ. ಅದರಲ್ಲೂ ವರ್ಷಕ್ಕೆ 46 ಲಕ್ಷ ರೂಪಾಯಿ ಸಂಬಳ ಎಂದರೆ ಯಾರೂ ಸಹ ಇಂತಹ ಕೆಲಸವನ್ನು ಬಿಡಲು ಇಷ್ಟಪಡುವುದಿಲ್ಲ. ಲಕ್ನೋದ 27 ವರ್ಷದ ಯುವಕ ಶಾರ್ದೇಂದು ತಿವಾರಿ ಅವರಿಗೆ ಕಾರ್ಪೊರೇಟ್ ಸುಖಕ್ಕಿಂತ ದೇಶ ಸೇವೆಯೇ ದೊಡ್ಡದಾಗಿ ಕಂಡಿತು.

46 ಲಕ್ಷದ ಪ್ಯಾಕೇಜ್‌ಗೆ ಗುಡ್‌ಬೈ

ಶಾರ್ದೇಂದು ತಿವಾರಿ ಅವರು ಅಮೆಜಾನ್‌ನಲ್ಲಿ ಹಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಏರೋಸ್ಪೇಸ್ ದೈತ್ಯ 'ಏರ್‌ಬಸ್' ಕಂಪನಿಯಿಂದಲೂ ಆಕರ್ಷಕ ಉದ್ಯೋಗದ ಆಫರ್ ಇತ್ತು. ಆ ಎಲ್ಲಾ ಸೌಲಭ್ಯಗಳನ್ನು ತಿರಸ್ಕರಿಸಿದ ಶಾರ್ದೇಂದು, ಭಾರತೀಯ ಸೇನೆಯ ಸಮವಸ್ತ್ರ ಧರಿಸಲು ನಿರ್ಧರಿಸಿದರು. ಶನಿವಾರ ಬಿಹಾರದ ಗಯಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ (OTA) ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ಅವರು ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ.

ತಂದೆಯೇ ಸ್ಫೂರ್ತಿ

ಶಾರ್ದೇಂದು ಅವರ ಈ ನಿರ್ಧಾರಕ್ಕೆ ಅವರ ತಂದೆಯೇ ದೊಡ್ಡ ಸ್ಫೂರ್ತಿ. ಅವರ ತಂದೆ ಗೌರವಾನ್ವಿತ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ ಅವರು ಭಾರತೀಯ ಸೇನೆಯಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆಯನ್ನು ನೋಡಿಯೇ ಬೆಳೆದ ಶಾರ್ದೇಂದು ಅವರಿಗೆ ತಾವೂ ಕೂಡ ಸೇನೆ ಸೇರಬೇಕೆಂಬ ಹಂಬಲವಿತ್ತು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ (MTech) ಮುಗಿಸಿದ ನಂತರ ಅವರಿಗೆ ಟೆಕ್ ಕ್ಷೇತ್ರದಲ್ಲಿ ದೊಡ್ಡ ಅವಕಾಶಗಳು ಸಿಕ್ಕರೂ, ಅವರ ಗುರಿ ಮಾತ್ರ ಬದಲಾಗಲಿಲ್ಲ.

8 ಬಾರಿ ವಿಫಲವಾದರೂ ಬಿಡದ ಛಲ

ಸೇನೆ ಸೇರುವುದು ಶಾರ್ದೇಂದು ಅವರಿಗೆ ಸುಲಭವಾಗಿರಲಿಲ್ಲ. ಅವರು ಬರೋಬ್ಬರಿ 8 ಬಾರಿ ಸೇನಾ ಆಯ್ಕೆ ಪ್ರಕ್ರಿಯೆಯಲ್ಲಿ ವಿಫಲರಾಗಿದ್ದರು. ಆದರೂ ಧೃತಿಗೆಡದ ಅವರು 9ನೇ ಪ್ರಯತ್ನದಲ್ಲಿ ತಾಂತ್ರಿಕ ವಿಭಾಗದ ಮೂಲಕ ಸೇನೆಗೆ ಆಯ್ಕೆಯಾದರು. ಇವರ ಪ್ರತಿಭೆಯನ್ನು ಗುರುತಿಸಿದ ಸೇನಾ ಅಕಾಡೆಮಿ (OTA), ಇವರನ್ನು ಟ್ರೈನಿಂಗ್ ಅವಧಿಯಲ್ಲಿ 'ಸೀನಿಯರ್ ಅಂಡರ್ ಆಫೀಸರ್' ಎಂಬ ಪ್ರತಿಷ್ಠಿತ ಜವಾಬ್ದಾರಿಗೆ ನೇಮಿಸಿತ್ತು. ಸೇನೆ ಎಂಬುದು ಕೇವಲ ಕೆಲಸವಲ್ಲ, ಅದೊಂದು ಸಾಹಸ ಮತ್ತು ನಾಯಕತ್ವದ ಅವಕಾಶ ಎಂದು ಶಾರ್ದೇಂದು ತಮ್ಮ ನಿರ್ಧಾರವನ್ನು ಹೆಮ್ಮೆಯಿಂದ ಸಮರ್ಥಿಸಿಕೊಂಡಿದ್ದಾರೆ.

PREV
Read more Articles on
click me!

Recommended Stories

10ನೇ ಕ್ಲಾಸ್​​ ಪಾಸಾದವರಿಗೆ ಪೋಸ್ಟ್​ ಆಫೀಸ್​ನಲ್ಲಿ 23,757 ಹುದ್ದೆಗಳಿಗೆ ಅರ್ಜಿ ಆಹ್ವಾನ: ಡಿಟೇಲ್ಸ್​ ಇಲ್ಲಿದೆ
ಕೆಲಸ ಸಿಕ್ಕ ತಕ್ಷಣ ರಜೆ ಬಗ್ಗೆ ಯೋಚಿಸ್ತೀರ, ಕೆಲಸವಿಲ್ಲದವರ ಗೋಳು ಗೊತ್ತಾ?: ಯುವತಿ ನೋವಿನ ವಿಡಿಯೋ ವೈರಲ್!