₹46 ಲಕ್ಷದ ಅಮೆಜಾನ್ ಕೆಲಸ ತೊರೆದು ಸೇನೆಗೆ ಸೇರಿದ ಟೆಕ್ಕಿ: ಶರದೇಂದು ತಿವಾರಿ ದೇಶಪ್ರೇಮಕ್ಕೆ ಸಲಾಂ!

Published : Sep 05, 2026, 12:23 PM IST
Shardendu Tiwari Indian Army

ಸಾರಾಂಶ

ವಾರ್ಷಿಕ ₹46 ಲಕ್ಷ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತೊರೆದು, ಲಖನೌದ 27 ವರ್ಷದ ಶರದೇಂದು ತಿವಾರಿ ಭಾರತೀಯ ಸೇನೆಗೆ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ತಂದೆಯ ಹಾದಿಯಲ್ಲಿ ಸಾಗಿ, ಸತತ 8ನೇ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ ಅವರ ಈ ಸ್ಪೂರ್ತಿದಾಯಕ ಪಯಣ ಯುವಜನತೆಗೆ ಪ್ರೇರಣೆಯಾಗಿದೆ.

ನವದೆಹಲಿ (ಸೆ.5): ವಾರ್ಷಿಕ ₹46 ಲಕ್ಷಕ್ಕೂ ಅಧಿಕ ಭಾರಿ ಮೊತ್ತದ ಕಾರ್ಪೊರೇಟ್ ಸಂಬಳ, ಜಾಗತಿಕ ದೈತ್ಯ ಕಂಪನಿಯಲ್ಲಿ ಕ್ಲೌಡ್ ಇಂಜಿನಿಯರ್ ಹುದ್ದೆ, ಜೊತೆಗೆ ಜಾಗತಿಕ ಏರೋಸ್ಪೇಸ್ ಸಂಸ್ಥೆ 'ಏರ್‌ಬಸ್'ನಿಂದ ಬಂದಿದ್ದ ಅತ್ಯುತ್ತಮ ಆಫರ್... ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ದೇಶಸೇವೆಯ ತುಡಿತ ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿತ್ತು. ಪರಿಣಾಮ, ಐಷಾರಾಮಿ ಕಾರ್ಪೊರೇಟ್ ಬದುಕಿಗೆ ಗುಡ್‌ಬೈ ಹೇಳಿದ ಲಖನೌದ 27 ವರ್ಷದ ಯುವಕ ಶರದೇಂದು ತಿವಾರಿ, ಶನಿವಾರ ಬಿಹಾರದ ಗಯಾದಲ್ಲಿರುವ 'ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ'ಯಲ್ಲಿ (OTA) ತರಬೇತಿ ಪೂರ್ಣಗೊಳಿಸಿ ಭಾರತೀಯ ಸೇನೆಗೆ ಅಧಿಕಾರಿಯಾಗಿ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಿಂದ ಯಶಸ್ವಿಯಾಗಿ ದೇಶದ ರಕ್ಷಣಾಪಡೆಗೆ ಹೆಜ್ಜೆ ಇಟ್ಟಿರುವ ಶರದೇಂದು ತಿವಾರಿ ಅವರ ಈ ಪಯಣ ಮತ್ತು ನಿರ್ಧಾರ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ.

ತಂದೆಯ ಹಾದಿಯಲ್ಲೇ ಹೆಜ್ಜೆ ಇಟ್ಟ ಸೈನಿಕ

ಲಖನೌದ ನೀಲ್‌ಮಾಥ ನಿವಾಸಿಯಾಗಿರುವ ಶರದೇಂದು ಕುಟುಂಬ ಮೂಲತಃ ಸುಲ್ತಾನ್‌ಪುರ ಜಿಲ್ಲೆಯ ಪೈಪರ್‌ಗಾಂವ್‌ಗೆ ಸೇರಿದ್ದಾಗಿದೆ. ಶರದೇಂದು ಅವರ ತಂದೆ ಗೌರವಾನ್ವಿತ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ ಅವರು ಸೇನಾ ಸೇವಾ ಪಡೆ (Army Service Corps) ಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಂದೆಯ ದೇಶಸೇವೆಯನ್ನು ಬಾಲ್ಯದಿಂದಲೂ ಹತ್ತಿರದಿಂದ ಕಂಡಿದ್ದ ಶರದೇಂದು ಅವರಲ್ಲಿ ಸಶಸ್ತ್ರ ಪಡೆ ಸೇರಬೇಕೆಂಬ ಬಲವಾದ ಆಸೆ ಚಿಗುರೊಡೆದಿತ್ತು.

ಚಂಡೀಮಂದಿರದ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಶರದೇಂದು, ಬಳಿಕ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ (IT) ಬಿ.ಇ ಪದವಿ ಪಡೆದರು. ನಂತರ ಚಂಡೀಗಢದ ಪ್ರತಿಷ್ಠಿತ 'ಪಂಜಾಬ್ ಇಂಜಿನಿಯರಿಂಗ್ ಕಾಲೇಜಿ'ನಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಷನ್ ಸೆಕ್ಯುರಿಟಿಯಲ್ಲಿ ಎಂಟೆಕ್ (MTech) ಉನ್ನತ ಶಿಕ್ಷಣ ಪೂರ್ಣಗೊಳಿಸಿದರು.

ಸತತ 8ನೇ ಪ್ರಯತ್ನದಲ್ಲಿ ಒಲಿದ ಯಶಸ್ಸು

ಸೇನಾಧಿಕಾರಿಯಾಗುವ ಹಾದಿ ಶರದೇಂದು ಅವರಿಗೆ ಸುಲಭವಾಗಿರಲಿಲ್ಲ. ಭಾರತೀಯ ಸೇನೆಯ ಆಯ್ಕೆ ಪ್ರಕ್ರಿಯೆಗೆ (SSB) ಅವರು ಸತತ 7 ಬಾರಿ ಹಾಜರಾಗಿದ್ದರೂ ಹಿನ್ನಡೆಯಾಗಿತ್ತು. ಆದರೆ ಧೃತಿಗೆಡದ ಅವರು, ಬಲವಾದ ಆತ್ಮವಿಶ್ವಾಸದಿಂದ 8ನೇ ಬಾರಿ ಪರೀಕ್ಷೆಗೆ ಹಾಜರಾಗಿ ಅಂತಿಮವಾಗಿ ಯಶಸ್ಸಿನ ಸಿಹಿ ಉಂಡರು.

ಸೇನೆಯ 'ಟೆಕ್ನಿಕಲ್ ಎಂಟ್ರಿ' (Technical Entry Route) ಮೂಲಕ ಆಯ್ಕೆಯಾದ ಕಾರಣ, ತಂತ್ರಜ್ಞಾನ ಕ್ಷೇತ್ರದ ಜೊತೆಗೆ ತಮ್ಮ ನಂಟು ಕಾಯ್ದುಕೊಳ್ಳುತ್ತಲೇ ಸೇನೆಯಲ್ಲಿ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಸಿಕ್ಕಿದೆ. "ಕಾರ್ಪೊರೇಟ್ ಜಗತ್ತಿಗಿಂತ ಸಾಹಸಮಯ ಬದುಕು ಹಾಗೂ ಫೀಲ್ಡ್ ಸರ್ವೀಸ್ ಮಾಡುವ ಅಪಾರ ಅವಕಾಶಗಳು ಭಾರತೀಯ ಸೇನೆಯಲ್ಲಿ ಸಿಗುತ್ತವೆ. ಇದೇ ನನ್ನನ್ನು ಹೆಚ್ಚು ಆಕರ್ಷಿಸಿತು," ಎಂದು ಶರದೇಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತರಬೇತಿಯಲ್ಲೂ ಮಿಂಚಿದ ಲಖನೌ ಯುವಕ

ಗಯಾದ ಒಟಿಎನಲ್ಲಿ (OTA Gaya) ಕಠಿಣ ಸೇನಾ ತರಬೇತಿಯ ಅವಧಿಯಲ್ಲಿ ತಮ್ಮ ಅತ್ಯುತ್ತಮ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ ಶರದೇಂದು, ಅಕಾಡೆಮಿಯ ಅತ್ಯುನ್ನತ ಕೆಡೆಟ್ ಹುದ್ದೆಗಳಲ್ಲಿ ಒಂದಾದ 'ಸೀನಿಯರ್ ಅಂಡರ್ ಆಫೀಸರ್' (SUO) ಆಗಿ ನೇಮಕಗೊಂಡಿದ್ದರು. ಕ್ರೀಡೆಯಲ್ಲೂ ಸಕ್ರಿಯರಾಗಿರುವ ಶರದೇಂದು ಅವರಿಗೆ ಬಾಸ್ಕೆಟ್‌ಬಾಲ್ ಮತ್ತು ಟೇಬಲ್ ಟೆನ್ನಿಸ್ ಆಡುವುದೆಂದರೆ ಅತ್ಯಂತ ಪ್ರೀತಿ. ತಂತ್ರಜ್ಞಾನ ಮತ್ತು ಸೇನಾ ಹುದ್ದೆಯ ಅಪರೂಪದ ಸಮ್ಮಿಲನವಾಗಿರುವ ಶರದೇಂದು ತಿವಾರಿ, ಈಗ ಗಡಿಯಲ್ಲಿ ತಂತ್ರಜ್ಞಾನದ ಬಲದೊಂದಿಗೆ ದೇಶ ಕಾಯಲು ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

PREV
Read more Articles on
click me!

Recommended Stories

ಕಾಲಿಗೆ ಚಿಪ್‌ ಅಳವಡಿಸಿ ಪೊಲೀಸ್‌ ಪೇದೆ ಹುದ್ದೆಗಳ ದೈಹಿಕ ಪರೀಕ್ಷೆಗೆ ಸಿದ್ಧತೆ, ಓಟ ಮುಗಿಸ್ತಿದ್ದಂತೆ ಮೊಬೈಲ್‌ಗೆ ಬರಲಿದೆ ರಿಸಲ್ಟ್‌
ಜಾಗತಿಕವಾಗಿ 1 ಲಕ್ಷ ನೌಕರರನ್ನು ವಜಾಕ್ಕೆ ಆಡಿ, ಪೋರ್ಷೆ ಒಡೆಯ ವೋಕ್ಸ್‌ವ್ಯಾಗನ್ ಬೃಹತ್ ಪ್ಲಾನ್, ಕಾರಣ ಈ ದೇಶಗಳು!