IPLನಲ್ಲಿ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ದಾಖಲೆ| ಕೊಳಗೇರಿ ಹುಡುಗನ ಬೌಲಿಂಗ್‌ಗೆ ಕೆಕೆಆರ್ ತತ್ತರ| ಟ್ರೋಲ್ ಮಾಡುತ್ತಿದ್ದವರ ಬಾಯಿ ಮುಚ್ಚಿಸಿದ ಸಿರಾಜ್
ಯುಎಎಇ(ಅ.22): IPLನಲ್ಲಿ ಆರ್ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ದಾಖಲೆ ಬರೆದಿದ್ದಾರೆ. ಪವರ್ ಪ್ಲೇನಲ್ಲಿ ಎರಡು ಮೇಡಿನ್ ಓವರ್ ಆಡಿ ಮೂರು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತನ್ನ ಆಟದಿಂದಲೇ ಉತ್ತರಿಸಿದ್ದಾರೆ. ಸಿರಾಜ್ ಈ ಹಂತಕ್ಕೆ ಬಂದು ನಿಲ್ಲಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಹೈದರಾಬಾದ್ನ ಕೊಳಗೇರಿಯಿಂದ ಬಂದ ಅವರು ಈಗ ಹೊಸ ದಾಖಲೆ ಬರೆದಿದ್ದಾರೆ.
ಆರ್ಸಿಬಿಗೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಬೇಕೆಂಬ ಗುರಿಯೊಂದಿಗೆ ಕೆಕೆಆರ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಿರುವಾಗ ಇತ್ತ ಮೊಹಮದ್ ಸಿರಾಜ್ ಮೊದಲ ಓವರ್ಗೆ ಇಳಿದಾಗಂತೂ ರನ್ ಹೊಳೆ ಹರಿಸಬಹುದು ಎಂದೇ ಕೆಕೆಆರ್ ಬ್ಯಾಟ್ಸ್ಮನ್ಗಳು ಅಂದುಕೊಂಡಿದ್ದರ. ಆದರೆ ಉತ್ಸಾಹ ಕೆಲವೇ ನಿಮಿಷಗಳಲ್ಲಿ ಮಾಯವಾಗಿತ್ತು. ಕೆಕೆಆರ್ ಬ್ಯಾಟ್ಸ್ಮನ್ಗಳಿಗೆ ಸಿರಾಜ್ ಅಕ್ಷರಶಃ ದುಸ್ವಪ್ನವಾಗಿ ಕಾಡಿ ಬಿಟ್ಟಿದ್ದರು.
ಎರಡನೇ ಓವರ್ಗೆ ಬೌಲಿಂಗ್‌ಗೆ ಇಳಿದ ಸಿರಾಜ್ ಯಾವುದೇ ರನ್ ನೀಡದೆ ಎರಡು ವಿಕೆಟ್ ಕಿತ್ತಿದ್ದರು. ನಾಲ್ಕನೇ ಓವರ್ನಲ್ಲಿ ಮತ್ತೆ ಬೌಲಿಂಗ್‌ಗೆ ಇಳಿದ ಅವರು ಮೇಡಿನ್ ಓವರ್ ಮಾಡಿ ಮತ್ತೊಂದು ವಿಕೆಟ್ ಕಬಳಿಸಿದರು. ಆ ಮೂಲಕ ಹೊಸ ದಾಖಲೆ ಬರೆದರು.
ಸಿರಾಜ್ ತುಂಬಾನೇ ಕಷ್ಟದ ದಿನವನ್ನು ನೋಡಿ ಬಂದವರು. ಅವರ ತಾಯಿ ಅನಕ್ಷರಸ್ಥೆ. ತಂದೆ ಆಟೋ ಚಾಲಕ. ಬಡತನ ಎಂಬುದು ಸಿರಾಜ್ ಹುಟ್ಟಿದಾಗಿನಿಂದಲೂ ಅವರಿಗೆ ಅಂಟಿಕೊಂಡೇ ಇತ್ತು. ನಂತರ ಅವರ ಬದುಕು ಬದಲಾಗಿದ್ದು, ಆರ್ಸಿಬಿ ಸಿರಾಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ಮೇಲೆಯೇ. ಕೊಹ್ಲಿ ನಾಯಕತ್ವದಲ್ಲಿ ಐಪಿಎಲ್ ಆಡಿದ ಮೇಲೆ ಸಿರಾಜ್ ಭಾರತ ತಂಡ ಪ್ರತಿನಿಧಿಸಿದ್ದರು. ಆರ್ಸಿಬಿ ಸೇರಿದ ನಂತರವೇ ಸಿರಾಜ್ ಹೈದರಾಬಾದ್ನಲ್ಲಿ ಹೊಸ ಮನೆ ಖರೀದಿಸಿದ್ದು.
ಒಂದು ಕೊಳಗೇರಿಯಿಂದ ಬಂದು ಸಿರಾಜ್ ಇಂದು ಈ ರೀತಿಯ ದಾಖಲೆ ಬರೆದಿದ್ದಾರೆ. ಅವರನ್ನು ನೋಡಿ ಟ್ರೋಲ್ ಮಾಡುತ್ತಿದ್ದವರು ಹೊಗಳುತ್ತಿದ್ದಾರೆ. ಅವರ ಬೌಲಿಂಗ್ ಹಿಗೆಯೇ ಮುಂದುವರಿಯಲಿ ಅನ್ನೋದು ಎಲ್ಲರ ಆಶಯ.