
ದುಬೈ(ಸೆ.28): 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿಶ್ರಫಲ ಅನುಭವಿಸಿದೆ. ಶುಭಾರಂಭದೊಂದಿಗೆ ಅಭಿಯಾನ ಆರಂಭಿಸಿದ ಆರ್‌ಸಿಬಿ, ಪಂಜಾಬ್ ವಿರುದ್ಧ 97 ರನ್‌ಗಳ ಸೋಲುಂಡಿತ್ತು. ಇದೀಗ ಕೊಹ್ಲಿ ಬಳಗ ಮತ್ತೆ ಗೆಲುವಿನ ಲಯಕ್ಕೆ ಮರಳಲು ಕಾತರಿಸುತ್ತಿದ್ದು, ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಸೋಮವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಎದುರು ಸೋತಿದ್ದ ಮುಂಬೈ, 2ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳ ಗೆಲುವು ಪಡೆದು ಆತ್ಮವಿಶ್ವಾಸ ಗಳಿಸಿದೆ. ಆಡಿರುವ 2 ಪಂದ್ಯದಲ್ಲಿ ತಲಾ 1 ಸೋಲು, 1 ಜಯ ಕಂಡಿರುವ ಮುಂಬೈ ಗೆಲುವಿನ ಲಯವನ್ನು ಮುಂದುವರಿಸುವ ತವಕದಲ್ಲಿದೆ. ಈ ಪಂದ್ಯವನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಫೈಟ್ ಎಂದೇ ಹೇಳಲಾಗುತ್ತಿದೆ.
ಆರ್‌ಸಿಬಿ ತಂಡದಲ್ಲಿ ಬದಲಾವಣೆ?: ದೇವದತ್ ಪಡಿಕ್ಕಲ್ ಸ್ಥಿರತೆ ಕಾಯ್ದುಕೊಳ್ಳುತ್ತಿಲ್ಲವಾದರೂ ಅವರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದರೆ ಆ್ಯರೋನ್ ಫಿಂಚ್ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಜೋಶ್ವಾ ಫಿಲಿಪಿ, ಡೇಲ್ ಸ್ಟೇನ್ ಮೇಲೂ ಒತ್ತಡವಿದೆ. ಈ ಪಂದ್ಯದಲ್ಲಿ ಮೋಯಿನ್ ಅಲಿ, ಇಸುರು ಉಡಾನ ಆಡುವ ಸಾಧ್ಯತೆ ಇದೆ. ಆಲ್ರೌಂಡರ್ ಕ್ರಿಸ್ ಮೋರಿಸ್ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ಆರ್‌ಸಿಬಿ ಪ್ಲೇ-ಆಫ್‌ನತ್ತ ಹೆಜ್ಜೆ ಹಾಕಬೇಕಿದ್ದರೆ ಇರುವ ಆಯ್ಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಮೇಲೆಯೇ ಹೆಚ್ಚು ಅವಲಂಬಿತಗೊಂಡರೆ ಕಳೆದ 3 ವರ್ಷಗಳಂತೆಯೇ ಲೀಗ್‌ನಲ್ಲೇ ಹೊರಬೀಳಬೇಕಾಗುತ್ತದೆ.
ಬೃಹತ್ ಟಾರ್ಗೆಟ್ ಚೇಸ್ ಮಾಡಿ ಗೆದ್ದ ರಾಜಸ್ಥಾನ, IPL ಇತಿಹಾಸದಲ್ಲೇ ದಾಖಲೆ!
ಬಲಿಷ್ಠವಾಗಿದೆ ಮುಂಬೈ: ಹಾಲಿ ಚಾಂಪಿಯನ್ ಮುಂಬೈ, ಆರ್ಸಿಬಿಗಿಂತ ಹೆಚ್ಚು ಸಮತೋಲನ ಹೊಂದಿದೆ. ರೋಹಿತ್ ಹಾಗೂ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಲಯದಲ್ಲಿದ್ದಾರೆ. ಡಿ ಕಾಕ್, ಪಾಂಡ್ಯ ಸಹೋದರರು, ಪೊಲ್ಲಾರ್ಡ್ ಹೀಗೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಮುಂಬೈ ಹೊಂದಿದೆ. ಜಸ್‌ಪ್ರೀತ್ ಬೂಮ್ರಾ, ಟ್ರೆಂಟ್ ಬೌಲ್ಟ್‌ರಂತಹ ಶ್ರೇಷ್ಠ ವೇಗಿಗಳ ಬಲವಿದೆ. ಆದರೆ ತಂಡ ಅನುಭವಿ ಸ್ಪಿನ್ನರ್‌ನ ಕೊರತೆ ಎದುರಿಸುತ್ತಿದೆ. ಯುವ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ಮರಳಿ ಪಡೆಯಲು ಆರ್‌ಸಿಬಿ ಕಾತರಿಸುತ್ತಿದೆ. ಮತ್ತೊಂದೆಡೆ ಕೊಹ್ಲಿ ಮೇಲೆ ಮೇಲುಗೈ ಸಾಧಿಸಿ, ಟೀಂ ಇಂಡಿಯಾದ ನಾಯಕತ್ವದ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ಎದುರು ನೋಡುತ್ತಿದ್ದಾರೆ.
ಒಟ್ಟು ಮುಖಾಮುಖಿ: 27
ಆರ್‌ಸಿಬಿ: 09
ಮುಂಬೈ: 18
ಸಂಭವನೀಯ ಆಟಗಾರರ ಪಟ್ಟಿ:
ಆರ್‌ಸಿಬಿ: ಆ್ಯರೋನ್ ಫಿಂಚ್, ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಮೊಯಿನ್ ಅಲಿ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಉಮೇಶ್ ಯಾದವ್, ಡೇಲ್ ಸ್ಟೇನ್, ಯಜುವೇಂದ್ರ ಚಹಲ್.
ಮುಂಬೈ: ಕ್ವಿಂಟನ್ ಡಿಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.
ಪಿಚ್ ರಿಪೋರ್ಟ್
ದುಬೈ ಪಿಚ್ ಸ್ಪಿನ್ ಸ್ನೇಹಿಯಾಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಲಾಭ ದೊರಕಲಿದೆ. ಈ ಮೈದಾನದಲ್ಲಿ ಈಗಾಗಲೇ 4 ಪಂದ್ಯಗಳು ನಡೆದಿದ್ದು, ನಾಲ್ಕರಲ್ಲೂ ಬೌಲರ್‌ಗಳು ನಿರ್ಣಾಯಕ ಪಾತ್ರವಹಿಸಿದ್ದಾರೆ. ಮೊದಲು ಬ್ಯಾಟ್ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಪಂದ್ಯ ಆರಂಭ: ರಾತ್ರಿ 7.30,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.