
ಅಬುಧಾಬಿ(ಅ.24): ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮಾರಕ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ ನೈಟ್ ರೈಡರ್ಸ್ ಎದುರು 59 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಕೋಲ್ಕತ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಕೋಲ್ಕತ ನೈಟ್ ರೈಡರ್ಸ್ ನೀಡಿದ್ದ 195 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ಎಸೆತದಲ್ಲೇ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡಿತು. ಇನ್ನು ಕಳೆದೆರಡು ಪಂದ್ಯಗಳಲ್ಲಿ ಶತಕ ಬಾರಿಸಿದ್ದ ಶಿಖರ್ ಧವನ್ ಕೂಡಾ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್(47) ಹಾಗೂ ರಿಷಭ್ ಪಂತ್(27) ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸಲು ನಾಯಕ ಮಾರ್ಗನ್ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಕಣಕ್ಕಿಳಿಸಿದರು. ಆ ಮೇಲೆ ಡೆಲ್ಲಿ ಅಕ್ಷರಶಃ ನಲುಗಿ ಹೋಯಿತು.
ವರುಣ್ ಚಕ್ರವರ್ತಿ ದರ್ಬಾರ್: ಚಕ್ರವರ್ತಿ ತಾವೆಸೆದ ಎರಡನೇ ಎಸೆತದಲ್ಲೇ ಪಂತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ತಮ್ಮ ಪಾಲಿನ ಎರಡನೇ ಓವರ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಹೆಟ್ಮೇಯರ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಓವರ್‌ನಲ್ಲಿ ಚಕ್ರವರ್ತಿ ಮತ್ತೋರ್ವ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಕಸ್ ಸ್ಟೋಯ್ನಿಸ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಕ್ಷರಶಃ ನಲುಗುವಂತೆ ಮಾಡಿದರು. ಅಂತಿಮವಾಗಿ ವರುಣ್ ಚಕ್ರವರ್ತಿ 4 ಓವರ್‌ನಲ್ಲಿ ಕೇವಲ 20 ರನ್ ನೀಡಿ 5 ವಿಕೆಟ್ ಕಬಳಿಸಿದರು.
IPL 2020: ಪಂಜಾಬ್ ವಿರುದ್ಧ ಟಾಸ್ ಗೆದ್ದ ಹೈದರಾಬಾದ್, ತಂಡದಲ್ಲಿ ಮಹತ್ವದ ಬದಲಾವಣೆ!
ಕೆಕೆಆರ್ ಪರ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 5 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಲಾಕಿ ಫರ್ಗ್ಯೂಸನ್ ಕೊನೆಯದಾಗಿ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್ ರೈಡರ್ಸ್ ತಂಡ ನಿತೀಶ್ ರಾಣಾ ಹಾಗೂ ಸುನಿಲ್ ನರೈನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ 194 ರನ್ ಬಾರಿಸಿತ್ತು. ನಿತೀಶ್ ರಾಣಾ 81 ರನ್ ಬಾರಿಸಿದರೆ, ಸುನಿಲ್ ನರೈನ್ 64 ರನ್ ಬಾರಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.