ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಒಟ್ಟು 8 ತಂಡಗಳು ಈ 5 ಪ್ರಮುಖ ಆಲ್ರೌಂಡರ್ ಖರೀದಿಸಲು ಪೈಪೋಟಿ ನಡೆಸಲಿದೆ. ಆ 5 ಸ್ಟಾರ್ ಆಲ್ರೌಂಡರ್‌ಗಳ ಕಿರುಪರಿಚಯ ಇಲ್ಲಿದೆ ನೋಡಿ...
ಬೆಂಗಳೂರು: ಬಹುನಿರೀಕ್ಷಿತ 2020ರ ಐಪಿಎಲ್ ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಯಾರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ಇಷ್ಟು ವರ್ಷ ಐಪಿಎಲ್ ಆಟಗಾರರ ಹರಾಜಿಗೆ ಬೆಂಗಳೂರು ಆತಿಥ್ಯ ವಹಿಸುತಿತ್ತು. ಇದೀಗ ಮೊದಲ ಬಾರಿಗೆ ಸಿಟಿ ಆಫ್ ಜಾಯ್ ಖ್ಯಾತಿಯ ಕೋಲ್ಕತಾ ಹರಾಜಿಗೆ ವೇದಿಗೆ ಒದಗಿಸಲಿದೆ. ಈ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಒಟ್ಟು 8 ತಂಡಗಳು ಈ 5 ಪ್ರಮುಖ ಆಲ್ರೌಂಡರ್ ಖರೀದಿಸಲು ಪೈಪೋಟಿ ನಡೆಸಲಿದೆ. ಕಳೆದ ಒಂದು ದಶಕದಲ್ಲಿ ಚುಟುಕು ಕ್ರಿಕೆಟ್’ನಲ್ಲಿ ಆಲ್ರೌಂಡರ್’ಗಳು ನಿರ್ಣಾಯಕ ಪಾತ್ರ ನಿಭಾಯಿಸಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಈ ಐವರು ಆಟಗಾರರನ್ನು ಖರೀದಿಸಲು ಪ್ರಾಂಚೈಸಿಗಳು ಮುಗಿಬೀಳುವ ಸಾಧ್ಯತೆಯಿದೆ. ಅಷ್ಟಕ್ಕೂ ಯಾರು ಆ 5 ಆಲ್ರೌಂಡರ್’ಗಳು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
undefined
1. ಬೆನ್ ಕಟ್ಟಿಂಗ್ಸ್[ಆಸ್ಟ್ರೇಲಿಯಾ]:
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಬೆನ್ ಕಟ್ಟಿಂಗ್ಸ್ ಚುಟುಕು ಕ್ರಿಕೆಟ್ ಟೂರ್ನಿಗೆ ಹೇಳಿ ಮಾಡಿಸಿದ ಆಲ್ರೌಂಡರ್. ಆದರೆ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರಿಂದ ತಂಡದಿಂದ ಕೈಬಿಡಲಾಗಿದೆ. 2016ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಕಟ್ಟಿಂಗ್ಸ್, ಬೌಲಿಂಗ್’ನಲ್ಲೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಕ್ಷಮತೆ ಹೊಂದಿದ್ದಾರೆ. ಕಳೆದ ವರ್ಷ ಪಾಕಿಸ್ತಾನ ಪ್ರೀಮಿಯರ್ ಲೀಗ್ ಹಾಗೂ ಟಿ10 ಲೀಗ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಕಟ್ಟಿಂಗ್ಸ್ ಖರೀದಿಸಲು RCB ಸೇರಿದಂತೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ.
2. ಕ್ರಿಸ್ ಜೋರ್ಡನ್[ಇಂಗ್ಲೆಂಡ್]
ಇಂಗ್ಲೆಂಡ್ ತಂಡದ 31 ವರ್ಷದ ಆಲ್ರೌಂಡರ್ ಕ್ರಿಸ್ ಜೋರ್ಡನ್ ಕಳೆದ ಎರಡು-ಮೂರು ವರ್ಷಗಳಿಂದ ಒಳ್ಳೆಯ ಫಾರ್ಮ್’ನಲ್ಲಿದ್ದು, ಚುಟುಕು ಕ್ರಿಕೆಟ್’ನಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಭಾಗವಾಗಿದ್ದಾರೆ. 2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್’ನಿಂದ ಇಲ್ಲಿಯವರೆಗೂ ಇಂಗ್ಲೆಂಡ್ ಆಡಿದ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿದಿದ್ದಾರೆ. ಬೌಲಿಂಗ್ ಮಾತ್ರವಲ್ಲದೇ ಫೀಲ್ಡಿಂಗ್’ನಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಕ್ರಿಕೆಟಿಗನಾಗಿದ್ದಾರೆ. ಬೌಲಿಂಗ್’ನಲ್ಲಿ ವೇರಿಯೇಶನ್ ಮಾಡುವ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸುವ ಜೋರ್ಡನ್ ಖರೀದಿಸಲು RCB ಮುಗಿಬಿದ್ದರೂ ಅಚ್ಚರಿಪಡಬೇಕಿಲ್ಲ.
3. ಸ್ಯಾಮ್ ಕರನ್[ಇಂಗ್ಲೆಂಡ್]:
ಕಳೆದ ಐಪಿಎಲ್ ಆವೃತ್ತಿಯಲ್ಲಿ ಮಿಂಚಿನ ಬೌಲಿಂಗ್ ದಾಳಿ ನಡೆಸುವ ಮೂಲಕ ಪಂಜಾಬ್ ತಂಡಕ್ಕೆ ಕೆಲವು ಸ್ಮರಣೀಯ ಗೆಲುವು ತಂದಿತ್ತ ಸ್ಯಾಮ್ ಕರನ್ ಅವರನ್ನು ಫ್ರಾಂಚೈಸಿ ಕೈಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಕಳೆದ ಆವೃತ್ತಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 10 ವಿಕೆಟ್ ಪಡೆದು ಮಿಂಚಿದ್ದರು. ಇದಷ್ಟೇ ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ಎದುರು ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದಿದ್ದರು. ಬ್ಯಾಟಿಂಗ್’ನಲ್ಲೂ ತಂಡಕ್ಕೆ ನೆರವಾಗಿದ್ದರು. ಇದೀಗ ಕರನ್ ಹರಾಜಿಗೆ ಲಭ್ಯವಿದ್ದು, 21 ವರ್ಷದ ಯುವ ಕ್ರಿಕೆಟಿಗನನ್ನು ಖರೀದಿಸಲು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿವೆ.
4. ಜೇಮ್ಸ್ ನೀಶಮ್[ನ್ಯೂಜಿಲೆಂಡ್]:
ಜೇಮ್ಸ್ ನೀಶಮ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಉಪಯುಕ್ತ ಕಾಣಿಕೆ ನೀಡಬಲ್ಲ ಕ್ರಿಕೆಟಿಗ. 2019ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಐಪಿಎಲ್ ಫ್ರಾಂಚೈಸಿಗಳು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನು ಕಳೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ನ್ಯೂಜಿಲೆಂಡ್ ಪರ ಮೂರನೇ ಗರಿಷ್ಠ ರನ್ ಬಾರಿಸಿದ[232], ಹಾಗೆಯೇ 15 ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಫೈನಲ್’ವರೆಗೂ ಕೊಂಡೊಯ್ಯುವಲ್ಲಿ ನೆರವಾಗಿದ್ದರು. ಈಗಾಗಲೇ ಕೆಲವು ಆಲ್ರೌಂಡರ್’ಗಳು ಗಾಯಕ್ಕೆ ತುತ್ತಾಗಿರುವುದರಿಂದ ನೀಶಮ್ ದುಬಾರಿ ಮೊತ್ತಕ್ಕೆ ಸೇಲಾಗುವ ಸಾಧ್ಯತೆಯಿದೆ.
5. ಕ್ರಿಸ್ ಮೋರಿಸ್[ದಕ್ಷಿಣ ಆಫ್ರಿಕಾ]
ದಕ್ಷಿಣ ಆಫ್ರಿಕಾ ಸ್ಟಾರ್ ಆಲ್ರೌಂಡರ್ ಕ್ರಿಸ್ ಮೋರಿಸ್ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2018ರ ಹರಾಜಿಗೂ ಮುನ್ನ ಡೆಲ್ಲಿ ರೀಟೈನ್ ಮಾಡಿಕೊಂಡ ಮೂವರು ಆಟಗಾರರಲ್ಲಿ ಮೋರಿಸ್ ಕೂಡಾ ಒಬ್ಬರಾಗಿದ್ದರು. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಪರ 9 ಪಂದ್ಯಗಳನ್ನಾಡಿದ್ದ ಮೋರಿಸ್ 13 ವಿಕೆಟ್ ಪಡೆದಿದ್ದರು. ಆದರೆ ಬ್ಯಾಟಿಂಗ್’ನಲ್ಲಿ ಡೆಲ್ಲಿ ನಿರೀಕ್ಷಿಸಿದಷ್ಟು ರನ್ ಮೋರಿಸ್ ಗಳಿಸಿರಲಿಲ್ಲ. ಡೆಲ್ಲಿ ಇಲ್ಲವೇ ಚೆನ್ನೈ ಮೋರಿಸ್ ಖರೀದಿಸುವ ಸಾಧ್ಯತೆಯಿದೆ.