
ದುಬೈ(ಸೆ.21): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಉತ್ಸಾಹ, ಹೊಸ ತಂಡದೊಂದಿಗೆ ಕಣಕ್ಕಳಿದು ಹೊಸ ಫಲಿತಾಂಶ ನೀಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್, ದೇವದತ್ ಪಡಿಕ್ಕಲ್ ಸಿಡಿಸಿದ ಹಾಫ್ ಸೆಂಚುರಿ ಹಾಗೂ ಯಜುವೇಂದ್ರ ಚಹಾಲ್ ಸ್ಪಿನ್ ದಾಳಿಯಿಂದ RCB 10 ರನ್ ಗೆಲುವು ಸಾಧಿಸಿದೆ.
164 ರನ್ ಗುರಿ ಪಡೆದ ಹೈದರಾಬಾದ್ ತಂಡ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಉಮೇಶ್ ಯಾದವ್ ಅದ್ಭುತ ರನೌಟ್ ಆರಂಭಿಕ ಯಶಸ್ಸು ತಂದುಕೊಟ್ಟಿತು. ಆದರೆ ಕನ್ನಡಿಗ ಮನೀಶ್ ಪಾಂಡೆ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟಕ್ಕೆ ಆರ್‌ಸಿಬಿ ಸುಸ್ತಾಯಿತು. ಪಾಂಡೆ ಹಾಗೂ ಬೈರ್‌ಸ್ಟೋ ಜೊತೆಯಾಟ RCB ತಂಡದಲ್ಲಿದ್ದ ಇನ್ನಿಲ್ಲದ ಚಿಂತೆಗೆ ಕಾರಣವಾಯಿತು.
4 ಓವರ್‌ನಲ್ಲಿ 48 ರನ್ ನೀಡಿದ ಉಮೇಶ್ ಯಾದವ್ ಕಳೆದ ಆವೃತ್ತಿಗಳಂತೆ ದುಬಾರಿಯಾದರು. ಅಬ್ಬರಿಸಲು ಆರಂಭಿಸಿದ ಪಾಂಡೆ ಹಾಗೂ ಬೈರ್‌ಸ್ಟೋ ಜೋಡಿಯನ್ನು ಯಜುವೇಂದ್ರ ಚಹಾಲ್ ಬೇರ್ಪಡಿಸಿದರು. ಪಾಂಡೆ 34 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಬೈರ್‌ಸ್ಟೋ ಆಟಕ್ಕೆ ಬ್ರೇಕ್ ಬೀಳಲಿಲ್ಲ. ಹಾಫ್ ಸೆಂಚುರಿ ಸಿಡಿಸಿ ಮುನ್ನುಗ್ಗಿದರು.
61 ರನ್ ಸಿಡಿಸಿದ ಜಾನಿ ಬೈರ್‌ಸ್ಟೋ, ಚಹಾಲ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನನ್ನಲ್ಲೇ ವಿಜಯ್ ಶಂಕರ್ ವಿಕೆಟ್ ಪತನಗೊಂಡಿತು. ಚಹಾಲ್ 3 ವಿಕೆಟ್ ಕಬಳಿಸುತ್ತಿದ್ದಂತೆ ಪಂದ್ಯದ ರೋಚಕತೆ ಹೆಚ್ಚಾಯಿತು. ಇತ್ತ ಆಸರೆಯಾಗಿದ್ದ ಪ್ರಿಯಂ ಗರ್ಗ್ 12 ರನ್ ಸಿಡಿಸಿ ನಿರ್ಗಮಿಸಿದರು.. ಅಭಿಶೇಕ್ ಶರ್ಮಾ ರನೌಟ್ ಆದರು.
ಅಂತಿಮ ಹಂತದಲ್ಲಿ ಹೈದರಾಬಾದ್ ಮೇಲೆ ಹೆಚ್ಚು ಒತ್ತಡ ಹೇರುವಲ್ಲಿ RCB ಯಶಸ್ವಿಯಾಯಿತು. ಅಂತಿಮ 18 ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 29 ರನ್ ಅವಶ್ಯಕತೆ ಇತ್ತು. ರಶೀದ್ ಖಾನ್ ಹಾಗೂ ಭುವನೇಶ್ವರ್ ಕುಮಾರ್, ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. 18ನೇ ಓವರ್ ಮುಕ್ತಾಯದ ವೇಳೆಗೆ ಪಂದ್ಯದ ಚಿತ್ರಣ ಬದಲಾಗಿತ್ತು. RCB ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು.
SRH ಗೆಲುವಿಗೆ ಅಂತಿಮ 6 ಎಸೆತದಲ್ಲಿ 18 ರನ್ ಅವಶ್ಯಕತೆ ಇತ್ತು. ಆದರೆ ಡೇಲ್ ಸ್ಟೇನ್ ದಾಳಿಗೆ ಹೈದರಾಬಾದ್ ತತ್ತರಿಸಿತು. ಸಂದೀಪ್ ಶರ್ಮಾ ವಿಕೆಟ್ ಪತನದೊಂದಿದೆ ಹೈದರಾಬಾದ್ 19.4 ಓವರ್‌ನಲ್ಲಿ 153 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಬೆಂಗಳೂರು ತಂಡ10 ರನ್‌ಗಳ ಗೆಲುವು ಸಾಧಿಸಿತು. 13ನೇ ಆವೃತ್ತಿ ಐಪಿಎಲ್ ಟೂರ್ನಿ ಶುಭಾರಂಭ ಮಾಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.