
ಬೆಂಗಳೂರು(ಆ.21): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಶುಕ್ರವಾರ ವಿಶೇಷ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳಸಲಿದೆ ಎಂದು ತಂಡದ ಅಧ್ಯಕ್ಷ ಸಂಜೀವ್ ಚುರಿವಾಲಾ ಗುರುವಾರ ತಿಳಿಸಿದರು.
ತಂಡದಲ್ಲಿರುವ ಭಾರತೀಯ ಆಟಗಾರರು ಆ.14ರಂದೇ ಬೆಂಗಳೂರಿಗೆ ಆಗಮಿಸಿ, 7 ದಿನಗಳ ಕ್ವಾರಂಟೈನ್ ಪೂರೈಸಿದ್ದು ದುಬೈಗೆ ತೆರಳಿದ ಬಳಿಕ ಮತ್ತೆ 7 ದಿನಗಳ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ. ಆಟಗಾರರಿಗೆ 3 ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ, ದುಬೈನಲ್ಲಿ ಮತ್ತೆ 3 ಬಾರಿ ಪರೀಕ್ಷೆ ನಡೆಸಿದ ಬಳಿಕ ಆ.29ರಿಂದ 3 ವಾರಗಳ ಶಿಬಿರ ನಡೆಯಲಿದೆ ಎಂದು ಸಂಜೀವ್ ತಿಳಿಸಿದರು.
ದುಬೈನಲ್ಲಿರುವ ವಾಲ್ಡೊರ್ಫ್ ಎಸ್ಟೋರಿಯಾ ಪಂಚತಾರಾ ಹೋಟೆಲ್‌ನ ಇಡೀ ಬ್ಲಾಕ್ ಅನ್ನು (ಸುಮಾರು 155 ಕೊಠಡಿ) ಕಾಯ್ದಿರಿಸಲಾಗಿದ್ದು, ಪ್ರತ್ಯೇಕ ಜಿಮ್, ಡೈನಿಂಗ್ ಹಾಲ್, ಕಾನ್ಫರೆನ್ಸ್ ಕೊಠಡಿ, ಲಿಫ್ಟ್‌ಗಳು ಇರಲಿವೆ. ತಂಡ ಟೂರ್ನಿಯುದ್ದಕ್ಕೂ ಇದೇ ಹೋಟೆಲ್‌ನಲ್ಲೇ ಉಳಿಯಲಿದೆ. ಆಟಗಾರರ ಸುರಕ್ಷತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಜೀವ್ ಹೇಳಿದರು.
2020ರ ಐಪಿಎಲ್ಗಷ್ಟೇ ಡ್ರೀಮ್ 11 ಪ್ರಾಯೋಜಕತ್ವ
ದಕ್ಷಿಣ ಆಫ್ರಿಕಾದ ಆಟಗಾರರು ಆ.22ಕ್ಕೆ ದುಬೈಗೆ ತಲುಪಲಿದ್ದು, ಲಂಕಾ ವೇಗಿ ಇಸುರು ಉಡನ ಸೆ.1ಕ್ಕೆ ತಂಡ ಕೂಡಿಕೊಳ್ಳಲಿದ್ದಾರೆ. ಇಂಗ್ಲೆಂಡ್-ಆಸ್ಪ್ರೇಲಿಯಾ ನಡುವಿನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಮೋಯಿನ್ ಅಲಿ, ಆ್ಯರೋನ್ ಫಿಂಚ್ ಸೆ.17ಕ್ಕೆ ದುಬೈಗೆ ಬರಲಿದ್ದಾರೆ ಎಂದು ಹೇಳಿದ ಅವರು, ಮೊದಲ ಪಂದ್ಯಕ್ಕೂ ಮುನ್ನ ಬಹುತೇಕ ಎಲ್ಲಾ ಆಟಗಾರರು ತಂಡ ಕೂಡಿಕೊಳ್ಳಲಿದ್ದಾರೆ ಎಂದರು. ಇಂಗ್ಲೆಂಡ್‌ನಿಂದ ಆಗಮಿಸುವ ಆಟಗಾರರು ಬಯೋ ಸೆಕ್ಯೂರ್ ವಾತಾವರಣದಲ್ಲೇ ಇರಲಿದ್ದು, ದುಬೈಗೆ ಬಂದ ಬಳಿಕ ಮತ್ತೆ ಕ್ವಾರಂಟೈನ್‌ಗೆ ಒಳಪಡುವ ಅಗತ್ಯ ಇರುವುದಿಲ್ಲ ಎಂದರು.
ಯುಎಇ ತಲುಪಿದ ರಾಯಲ್ಸ್, ಪಂಜಾಬ್: ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಸೇರಿದಂತೆ ಇನ್ನೂ ಕೆಲ ತಂಡಗಳು ಗುರುವಾರವೇ ಯುಎಇಗೆ ತೆರಳಿದವು. 7 ದಿನಗಳ ಕಡ್ಡಾಯ ಕ್ವಾರಂಟೈನ್ ಬಳಿಕ ತಂಡಗಳು ಅಭ್ಯಾಸ ಆರಂಭಿಸಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.