RCB ತಂಡದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಾಯಕ ವಿರಾಟ್ ಕೊಹ್ಲಿ..!

By Suvarna NewsFirst Published Sep 10, 2020, 11:22 AM IST
Highlights

ಈಗಾಗಲೇ ಐಪಿಎಲ್ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನಾಯಕ ವಿರಾಟ್ ಕೊಹ್ಲಿ, 2016ರ ಬಳಿಕ ಈ ಸಲ ನಮ್ಮ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ ಎಂದು ಹೇಳಿದ್ದಾರೆ.  ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಸೆ.10): 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಕಳೆದ 12 ಆವೃತ್ತಿಯಿಂದಲೂ ಐಪಿಎಲ್ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದರ ಬೆನ್ನಲ್ಲೇ RCB ನಾಯಕ ವಿರಾಟ್ ಕೊಹ್ಲಿ ತಂಡದ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಈಗಾಗಲೇ ಐಪಿಎಲ್ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ನಾಯಕ ವಿರಾಟ್ ಕೊಹ್ಲಿ, 2016ರ ಬಳಿಕ ಈ ಸಲ ನಮ್ಮ ತಂಡ ಅತ್ಯಂತ ಸಮತೋಲನದಿಂದ ಕೂಡಿದೆ ಎಂದು ಹೇಳಿದ್ದಾರೆ. 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್ ವಿರುದ್ಧ ಮುಗ್ಗರಿಸುವ ಮೂಲಕ ಚೊಚ್ಚಲ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.

ಈ ಸಲ ತಂಡದಲ್ಲಿ ಸಾಕಷ್ಟು ಹಿರಿ-ಕಿರಿಯ ಪ್ರತಿಭಾನ್ವಿತ ಆಟಗಾರರಿದ್ದಾರೆ ಎನ್ನುವ ಅಭಿಪ್ರಾಯವನ್ನು ಕೊಹ್ಲಿ ವ್ಯಕ್ತ ಪಡಿಸಿದ್ದಾರೆ. ನಮಗೆ ಈ ಬಾರಿ ಸಾಕಷ್ಟು ಸಮತೋಲಿತ ತಂಡ ಸಿಕ್ಕಿದೆ. ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಯುವ ಕ್ರಿಕೆಟಿಗರು ನಮ್ಮ ತಂಡದಲ್ಲಿದ್ದಾರೆ. ಇದರ ಜತೆಗೆ ತಮ್ಮ ಜವಾಬ್ದಾರಿಯನ್ನು ಹೊರಲು ಉತ್ಸುಕರಾಗಿದ್ದಾರೆ. ಅಂತಹ ಆಟಗಾರರಿಗೆ ಸೂಕ್ತ ಸಂದರ್ಭದಲ್ಲಿ ಅವಕಾಶ ಒದಗಿಸಲಾಗುವುದು ಎಂದು RCB TV ಬಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

ಇದರೊಂದಿಗೆ 2017ರಿಂದ 2019ರ ಆವೃತ್ತಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಮತೋಲನದಿಂದ ಕೂಡಿರಲಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 2016ರ ಬಳಿಕ RCB ಗಮನಾರ್ಹ ಪ್ರದರ್ಶನ ತೋರಲು ಪದೇ ಪದೇ ವಿಫಲವಾಗಿತ್ತು. 

ಇನ್ನು ಇದೇ ವೇಳೆ ಎಬಿ ಡಿವಿಲಿಯರ್ಸ್ ಅವರನ್ನು ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಗುಣಗಾನ ಮಾಡಿದ್ದಾರೆ. ಕ್ರಿಕೆಟ್‌ನಿಂದ ಸಾಕಷ್ಟು ಬಿಡುವಿನ ಬಳಿಕ ಮತ್ತೆ ಎಬಿಡಿ ತಂಡ ಕೂಡಿಕೊಳ್ಳುತ್ತಿದ್ದಾರೆ. 2011ರಲ್ಲಿ ಆಡುತ್ತಿದ್ದಂತೆ ಎಬಿಡಿ ಕಾಣುತ್ತಿದ್ದಾರೆ. ಎಬಿಡಿ ಈ ಸಲವೂ ರನ್ ಮಳೆ ಹರಿಸಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.


 

click me!