IPL ಪಂದ್ಯಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..?

By Suvarna NewsFirst Published Jan 25, 2020, 1:31 PM IST
Highlights

ಬಹುನಿರೀಕ್ಷಿತ ಐಪಿಎಲ್ ಟೂರ್ನಿ ಯಾವಾಗಿಂದ ಆರಂಭವಾಗುತ್ತೆ ಎನ್ನುವ ಕುತೂಹಲ ಜೋರಾಗಿದೆ. ಹೀಗಿರುವಾಗಲೇ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗುವ ಸಾಧ್ಯ ಎನ್ನಲಾಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ(ಜ.25): 2020ರ ಆವೃತ್ತಿಯ ಐಪಿಎಲ್‌ ಆರಂಭಕ್ಕೆ ಇನ್ನು 2 ತಿಂಗಳು ಬಾಕಿ ಇದ್ದು, ಸದ್ಯದಲ್ಲೇ ಅಧಿಕೃತ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಈ ಬಾರಿ ಪಂದ್ಯಗಳನ್ನು ರಾತ್ರಿ 8ರ ಬದಲು ಸಂಜೆ 7.30ಕ್ಕೆ ಆರಂಭಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. 

ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಪ್ರಸ್ತಾಪವನ್ನು ಫ್ರಾಂಚೈಸಿಗಳ ಮುಂದಿಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ರಾತ್ರಿ 11ರ ಬಳಿಕ ವೀಕ್ಷಕರ ಕೊರತೆ ಎದುರಾಗಲಿದೆ ಎನ್ನುವ ಕಾರಣದಿಂದ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಕಳೆದ ವರ್ಷ ಪಂದ್ಯಗಳನ್ನು ಸಂಜೆ 7 ಗಂಟೆಗೆ ಆರಂಭಿಸುವಂತೆ ಕೇಳಿಕೊಂಡಿತ್ತು. 

ಸದ್ಯದಲ್ಲೇ ಐಪಿಎಲ್‌ ಆಡಳಿತ ಸಮಿತಿ ಸಭೆ ನಡೆಯಲಿದ್ದು, ಸಮಯದ ಬದಲಾವಣೆ ಬಗ್ಗೆ ಚರ್ಚೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ವೇಳಾಪಟ್ಟಿ ಸಿದ್ಧವಿದ್ದು, ರಾಜಸ್ಥಾನ ರಾಯಲ್ಸ್‌ ತಂಡ ಕೆಲ ಪಂದ್ಯಗಳನ್ನು ಗುವಾಹಟಿಯಲ್ಲಿ ಆಯೋಜಿಸಲು ಇಚ್ಛಿಸಿದೆ. ಭದ್ರತಾ ವ್ಯವಸ್ಥೆ ಪರಿಶೀಲನೆಯಿಂದಾಗಿ ವೇಳಾಪಟ್ಟಿ ಬಿಡುಗಡೆ ತಡವಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ 13 ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಎಲ್ಲಾ ಎಂಟು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದೆ. ಇನ್ನು ಚೊಚ್ಚಲ ಕಪ್ ಗೆಲ್ಲುವ ಕನವರಿಕೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರೋನ್ ಫಿಂಚ್ ಸೇರಿದಂತೆ ಎಂಟು ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

click me!