143 ರನ್ ಟಾರ್ಗೆಟ್ ಒಂದು ಹಂತದಲ್ಲಿ ಕೆಕೆಆರ್ ತಂಡಕ್ಕೆ ಸವಾಲಾಗಿ ಪರಿಣಮಿಸಿತ್ತು. ಆದರೆ ಶುಭಮಾನ್ ಗಿಲ್ ಹೋರಾಟದಿಂದ ಕೋಲ್ಕತಾ ನೈಟ್ ರೈಡರ್ಸ್ ಮೊದಲ ಗೆಲುವು ಸಾಧಿಸಿದೆ.
ಅಬು ಧಾಬಿ(ಸೆ.26): ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡ ಶುಭಾರಂಭಕ್ಕೆ ಕಠಿಣ ಹೋರಾಟ ನಡೆಸಿತು. ಈ ಸಮರದಲ್ಲಿ ಕೆಕೆಆರ್ ಗೆಲುವಿನ ಸಿಹಿ ಕಂಡಿದೆ. 143 ರನ್ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತಾ ತಂಡಕ್ಕೆ ಶುಬ್‌ಮಾನ್ ಗಿಲ್ ಹಾಫ್ ಸೆಂಚುರಿ ಹಾಗೂ ಇಯಾನ್ ಮಾರ್ಗನ್ ಬ್ಯಾಟಿಂಗ್ ನೆರವನಿಂದ 7 ವಿಕೆಟ್ ಗೆಲುವು ಸಾಧಿಸಿತು.
ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 142 ರನ್‌ಗಳಿಗೆ ಕಟ್ಟಿ ಹಾಕಿದ ಕೆಕೆಆರ್ , ಸುಲಭ ಗೆಲುವಿನ ಲೆಕ್ಕಾಚಾರದಲ್ಲಿತ್ತು. ಆದರೆ ಎಸ್ಆರ್‌ಹೆಚ್ ದಾಳಿಗೆ ಆರಂಭದಲ್ಲೇ ಕೆಕೆಆರ್ ಕಠಿಣ ಸವಾಲು ಎದುರಿಸಿತು. ಸುನಿಲ್ ನೈರನ್ ಡಕೌಟ್ ಆದರು. ಆದರೆ ಶುಭಮಾನ್ ಗಿಲ್ ಹಾಗೂ ನಿತೀಶ್ ರಾಣಾ ಜೊತೆಯಾಟದಿಂದ ಕೆಕೆಆರ್ ಚೇತರಿಸಿಕೊಂಡಿತು.
13 ಎಸೆತದಲ್ಲಿ 26 ರನ್ ಸಿಡಿಸಿದ ನಿತೀಶ್ ರಾಣ ವಿಕೆಟ್ ಪತನ ಕೆಕೆಆರ್ ತಂಡದಲ್ಲಿ ಮತ್ತೆ ಆತಂಕ ತಂದಿಟ್ಟಿತು. ಆದರೆ ಗಿಲ್ ಹೋರಾಟ ಮುಂದುವರಿಸಿದರು. ಇತ್ತ ನಾಯಕ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ಆದರೆ ಗಿಲ್ ಹಾಗೂ ಇಯಾನ್ ಮಾರ್ಗನ್ ಕೆಕೆಆರ್‌ಗೆ ಆಸರೆಯಾದರು. ಇವರಿಬ್ಬರ ಹೋರಾಟದಿಂದ ಕೆಕೆಆರ್ ಗೆಲಿವಿಗೆ ಅಂತಿಮ 30 ಎಸೆತದಲ್ಲಿ 30 ರನ್ ಅವಶ್ಯಕತೆ ಇತ್ತು.
ಅಬ್ಬರಿಸಿದ ಶುಬ್‌ಮಾನ್ ಗಿಲ್ 62 ಎಸೆತದಲ್ಲಿ ಅಜೇಯ 70 ರನ್ ಸಿಡಿಸಿದರು. ಇತ್ತ ಉತ್ತಮ ಹೋರಾಟ ನೀಡಿದ ಇಯಾನ್ ಮಾರ್ಗನ್ ಅಜೇಯ 42 ರನ್ ಸಿಡಿಸಿದರು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ಇನ್ನು 2 ಓವರ್ ಬಾಕಿ ಇರುವಂತೆ 7 ವಿಕೆಟ್ ಗೆಲುವು ಸಾಧಿಸಿತು.