13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 12ನೇ ಪಂದ್ಯದಲ್ಲಿಂದು ಸ್ಟೀವ್ ಸ್ಮಿತ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಕೆಕೆಆರ್ ತಂಡವನ್ನು ದುಬೈನಲ್ಲಿ ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದುಬೈ(ಸೆ.30): 13ನೇ ಆವೃತ್ತಿ ಐಪಿಎಲ್ ಟೂರ್ನಿಯ ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಗೆ ದಿನೇ ದಿನೇ ರೋಚಕತೆ ಹುಟ್ಟಿಸುತ್ತಿವೆ. ಬುಧವಾರ ಕೂಡ ಅಂತಹದ್ದೇ ಒಂದು ಪಂದ್ಯ ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಎದುರಾಗಲಿವೆ. ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ರಾಜಸ್ಥಾನ, ಮಿಶ್ರ ಫಲ ಅನುಭವಿಸಿರುವ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ಎದುರು ಮತ್ತೊಂದು ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ.
ಬಲಿಷ್ಠ ಬ್ಯಾಟಿಂಗ್ ಪಡೆ: ಪಂಜಾಬ್ ವಿರುದ್ಧದ ಪಂದ್ಯದಲ್ಲಿ 224 ರನ್‌ಗಳನ್ನು ಯಶಸ್ವಿ ಚೇಸಿಂಗ್ ಮಾಡುವ ಮೂಲಕ ರಾಜಸ್ಥಾನ ತಂಡ ಐಪಿಎಲ್ ಇತಿಹಾಸದ ಪುಟ ಸೇರಿದೆ. 2 ಪಂದ್ಯಗಳಲ್ಲೂ ರಾಜಸ್ಥಾನ 200ಕ್ಕೂ ಹೆಚ್ಚು ರನ್ ಕಲೆಹಾಕಿತ್ತು. ರಾಜಸ್ಥಾನ ಬಳಗದಲ್ಲಿ ಸಂಜು ಸ್ಯಾಮ್ಸನ್ ಮತ್ತು ರಾಹುಲ್ ತೆವಾಟಿಯಾ 2020ರಲ್ಲಿ ತಾರಾ ಆಟಗಾರರ ಲಿಸ್ಟ್‌ನಲ್ಲಿದ್ದಾರೆ. ಸಂಜು ಈ ಆವೃತ್ತಿಯಲ್ಲಿ 214.86ರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನಾಯಕ ಸ್ಮಿತ್ ಎರಡು ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಆರಂಭಿಕ ಬಟ್ಲರ್ ಆಟ ಇನ್ನು ಬಾಕಿ ಇದೆ. ಬೌಲಿಂಗ್‌ನಲ್ಲಿ ಆರ್ಚರ್, ಜೈದೇವ್ ಉನಾದ್ಕತ್ ಲಯಬದ್ಧ ದಾಳಿ ಸಂಘಟಿಸುವ ಸಾಮರ್ಥ್ಯ ಹೊಂದಿದ್ದಾರೆ.
ಬ್ಯಾಟ್ಸ್‌ಮನ್‌ಗಳ ಮೇಲೆ ನಂಬಿಕೆ:
ಇನ್ನು ಕೆಕೆಆರ್ ತಂಡ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು, 1 ಸೋಲು ಅನುಭವಿಸಿದೆ. ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೆದ್ದಿರುವ ಕೆಕೆಆರ್ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅತ್ಯುತ್ತಮ ಫಾಮ್‌ರ್‍ನಲ್ಲಿದ್ದಾರೆ. ನರೈನ್ ಜವಾಬ್ದಾರಿಯುತ ಆಟ ತೋರಬೇಕಿದೆ. ನಿತೀಶ್ ರಾಣಾ, ನಾಯಕ ದಿನೇಶ್ ಕಾರ್ತಿಕ್ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಆಲ್ರೌಂಡರ್ ಆ್ಯಂಡ್ರೆ ರಸೆಲ್ ಹಾಗೂ ಇಯಾನ್ ಮಾರ್ಗನ್ ಗೆ ಹೆಚ್ಚಿನ ಅವಕಾಶ ದೊರೆತಿಲ್ಲ. 5 ಹಾಗೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಯುತ್ತಿರುವ ಈ ಇಬ್ಬರು ಆಟಗಾರರಿಗೆ ಮೇಲ್ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಬೇಕಿದೆ. ಸ್ಪಿನ್ನರ್ ನರೈನ್ ವಿಕೆಟ್ ಕೀಳುವಲ್ಲಿ ಹಿಂದೆ ಬಿದ್ದಿದ್ದಾರೆ. ತಂಡದಲ್ಲಿ ಅನುಭವಿ ವೇಗಿಗಳ ಕೊರತೆಯಿದೆ.
undefined
IPL 2020: ಸೋಲಿಲ್ಲದ ಸರದಾರ ಡೆಲ್ಲಿಗೆ ಸೋಲುಣಿಸಿದ SRH!
ಪಿಚ್ ರಿಪೋರ್ಟ್:
ದುಬೈ ಪಿಚ್ ಸ್ಪಿನ್ನರ್‌ಗಳ ಪಾಲಿನ ಸ್ವರ್ಗ ಎನಿಸಿದೆ. ಒಮ್ಮೊಮ್ಮೆ ಸ್ವಿಂಗ್ ಬೌಲರ್‌ಗಳು ಲಾಭ ಪಡೆಯಲಿದ್ದಾರೆ. ಈ ಮೈದಾನದಲ್ಲಿ ಈಗಾಗಲೇ 5 ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯದಲ್ಲೂ ಬೌಲರ್‌ಗಳು ಪಂದ್ಯದ ಗತಿ ಬದಲಿಸಿದ್ದಾರೆ. ಹೀಗಾಗಿ ಟಾಸ್ ಪ್ರಮುಖ ಪಾತ್ರವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ:
ರಾಜಸ್ಥಾನ: ಬಟ್ಲರ್, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಅಂಕಿತ್ ರಜಪೂತ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್.
ಕೆಕೆಆರ್: ಶುಭ್‌ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ), ಇಯಾನ್ ಮಾರ್ಗನ್, ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ.
ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್