ಸುಲಭ ಟಾರ್ಗೆಟ್ ಚೇಸ್ ಮಾಡಲು ಹೈದರಾಬಾದ್ ವಿಫಲ, ಪಂಜಾಬ್‌ಗೆ ರೋಚಕ ಗೆಲುವು!

By Suvarna NewsFirst Published Oct 24, 2020, 11:44 PM IST
Highlights

127 ರನ್ ಸುಲಭ ಟಾರ್ಗೆಟ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೃಹತ್ತಾಗಿ ಗೋಚರಿಸಿತು. ಪಂಜಾಬ್ ತಂಡದ ಅದ್ಭುತ ಬೌಲಿಂಗ್ ದಾಳಿಗೆ ಹೈದರಾಬಾದ್ ಒಂದೊಂದು ರನ್ ಗಳಿಸಲುು ಪರದಾಡಿತು. ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಪಂಜಾಬ್ 12 ರನ್ ರೋಚಕ ಗೆಲುವು ದಾಖಲಿಸಿದೆ.

ದುಬೈ(ಅ.24):  ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತು. ಕೇವಲ 127 ರನ್ ಟಾರ್ಗೆಟ್ ಪಡೆದ ಹೈದರಾಬಾದ್ 114 ರನ್ ಸಿಡಿಸಿ ಸೋಲೊಪ್ಪಿಕೊಂಡಿದೆ. ಅತೀ ಕಡಿಮೆ ರನ್ ಡಿಫೆಂಡ್ ಮಾಡಿಕೊಳ್ಳವಲ್ಲಿ ಪಂಜಾಬ್ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.  

ಅಲ್ಪ ಮೊತ್ತ ದಾಖಲಿಸಿದ ಪಂಜಾಬ್, ಹೈದರಾಬಾದ್‌ಗೆ ಸುಲಭ ಗುರಿ!

ಗೆಲುವಿಗೆ 127 ರನ್ ಸುಲಭ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆಯಿತು. ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋ ಆರ್ಧಶತಕದ ಜೊತೆಯಾಟವಾಡಿದರು. ಡೇವಿಡ್ ವಾರ್ನರ್ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 35 ರನ್ ಸಿಡಿಸಿ ಔಟಾದರು.  ಈ ಮೂಲಕ ಆರಂಭಿಕರ ಜೊತೆಯಾಟ 56ರನ್‌ಗಳಿಗೆ ಅಂತ್ಯವಾಯಿತು. 

ಬೈರ್‌ಸ್ಟೋ 19 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಅಬ್ದುಲ್ ಸಮಾದ್ 7 ರನ್ ಸಿಡಿಸಿ ನಿರ್ಗಮಿಸಿದರು. 67 ರನ್‌ಗೆ 3 ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡದಲ್ಲಿ ಆತಂಕ ಸೃಷ್ಟಿಯಾಯಿತು. ಆದರೆ ಮನೀಶ್ ಪಾಂಡೆ ಹಾಗೂ ವಿಜಯ್ ಶಂಕರ್ ಜೊತೆಯಾಟದಿಂದ ಹೈದಾರಾಬಾದ್ ಚೇತರಿಸಿಕೊಂಡಿತು. 

ಮನೀಶ್ ಪಾಂಡೆ 15 ರನ್ ಸಿಡಿಸಿ ಔಟಾದರು. ಹೀಗಾಗಿ ಹೈದರಾಬಾದ್ ಗೆಲುವಿಗೆ 18 ಎಸೆತದಲ್ಲಿ 20 ರನ್ ಬೇಕಿತ್ತು. ವಿಜಯ್ ಶಂಕರ್ ಹಾಗೂ ಜೇಸನ್ ಹೋಲ್ಡರ್ ಮೇಲೆ ಒತ್ತಡ ಹೆಚ್ಚಾಯಿತು. ಶಂಕರ್ 26 ರನ್ ಸಿಡಿಸಿ ಔಟಾದರು. ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ದಾಳಿಗೆ ಸುಲಭ ಟಾರ್ಗೆಟ್ ಹೈದರಾಬಾದ್ ತಂಡಕ್ಕೆ ಸವಾಲಾಗಿ ಪರಿಣಿಮಿಸಿತು.

ಕ್ರಿಸ್ ಜೋರ್ಡಾನ್ ಎಸೆದ 19ನೇ ಓವರ್ ಹೈದರಾಬಾದ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ವಿಕೆಟ್ ಪತನಗೊಂಡಿತು. ಅಂತಿಮ 6 ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 14 ರನ್ ಬೇಕಿತ್ತು. 

ಅರ್ಶದೀಪ್ ಸಿಂಗ್ ಅಂತಿಮ ಓವರ್‌ನ 2ನೇ ಎಸೆತದಲ್ಲಿ ಸಂದೀಪ್ ಶರ್ಮಾ ವಿಕೆಟ್ ಕಬಳಿಸಿದರು. ಮರು ಎಸೆತದಲ್ಲೇ ಸನ್‌ರೈಸರ್ಸ್ ತಂಡದ ಭರವಸೆಯಾಗಿದ್ದ ಪ್ರಿಯಂ ಗರ್ಗ್ ವಿಕೆಟ್ ಕೂಡ ಪತನಗೊಂಡಿತು. 5ನೇ ಎಸೆದೃತದಲ್ಲಿ ಖಲೀಲ್ ಅಹಮ್ಮದ್ ವಿಕೆಟ್ ಪತನಗೊಂಡಿತು. ಈ ಮೂಲಕ ಹೈದರಾಬಾದ್ ತಂಡ 114 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ಪಂಜಾಬ್ 12 ರನ್‌ ರೋಚಕ ಗೆಲುವು ದಾಖಲಿಸಿತು. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

click me!