13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹೊರಬಿದ್ದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಕರ್ನಾಟಕದ ಬ್ಯಾಟ್ಸ್‌ಮನ್ ಆಯ್ಕೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.31): ವೈಯಕ್ತಿಕ ಕಾರಣಗಳಿಂದಾಗಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ರೌಂಡರ್ ಸುರೇಶ್ ರೈನಾ ಅವರ ಸ್ಥಾನ ತುಂಬಬಲ್ಲ ಆಟಗಾರರ ರೇಸಲ್ಲಿ ಕರ್ನಾಟಕದ ರೋಹನ್ ಕದಂ ಒಬ್ಬರಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರೋಹನ್ ಯಾವ ತಂಡಕ್ಕೂ ಆಯ್ಕೆಯಾಗಿರಲಿಲ್ಲ. ಈ ಬಾರಿ ರೈನಾ ಸ್ಥಾನಕ್ಕೆ ಚೆನ್ನೈ ತಂಡ ರಾಜ್ಯದ ರೋಹನ್‌ರನ್ನು ಆಯ್ಕೆ ಮಾಡಿದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಮಿಂಚಲಿದ್ದಾರೆ.
undefined
26 ವರ್ಷದ ರೋಹನ್ ಕದಂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ವಿರುದ್ಧ 71 ರನ್ ಬಾರಿಸಿ ಗಮನ ಸೆಳೆದಿದ್ದರು. ಹೀಗಿದ್ದು ಅವರು ಐಪಿಎಲ್ ಆಟಗಾರರ ಹರಾಜಿನಲ್ಲಿ ಯಾವೊಂದು ಫ್ರಾಂಚೈಸಿಯು ಖರೀದಿಸುವ ಮನಸು ಮಾಡಿರಲಿಲ್ಲ. ಇನ್ನು ಮುಷ್ತಾಕ್ ಅಲಿ ಟ್ರೋಫಿಯ ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲೂ ಕದಂ 28 ಎಸೆತಗಳಲ್ಲಿ 35 ರನ್ ಬಾರಿಸಿದ್ದರು. ಆ ಪಂದ್ಯವನ್ನು ಕರ್ನಾಟಕ ತಂಡ 1 ರನ್‌ಗಳಿಂದ ರೋಚಕವಾಗಿ ಗೆದ್ದು ಕಪ್ ತಮ್ಮದಾಗಿಸಿಕೊಂಡಿತು. ಒತ್ತಡದ ಸಂದರ್ಭದಲ್ಲಿ ಸರಾಗವಾಗಿ ಬ್ಯಾಟ್ ಬೀಸುವುದನ್ನು ಕದಂ ಕರಗತ ಮಾಡಿಕೊಂಡಿದ್ದಾರೆ.
ಸಿಎಸ್‌ಕೆ ಅಭ್ಯಾಸ ಶಿಬಿರ ವಿಳಂಬ: ಸೆಪ್ಟೆಂಬರ್ 6ರಿಂದ ಶುರು?
ರೋಹನ್ ಸದ್ಯ ಫಾರ್ಮ್‌ನಲ್ಲಿರುವ ಆಟಗಾರರಾಗಿದ್ದಾರೆ.ಉಳಿದಂತೆ ಯುಸೂಫ್ ಪಠಾಣ್, ಮನೋಜ್ ತಿವಾರಿ ರೇಸ್‌ನಲ್ಲಿರುವ ಇತರೆ ಆಟಗಾರರಾಗಿದ್ದಾರೆ. ಹೀಗಾಗಿ ಈ ಮೂವರು ಆಟಗಾರರ ಪೈಕಿ ಯಾರಿಗೆ ಸಿಎಸ್‌ಕೆ ಮಣೆ ಹಾಕುತ್ತೆ? ಅಥವಾ ಈ ಮೂವರು ಆಟಗಾರರನ್ನು ಬಿಟ್ಟು ಬೇರೆ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.