
ದುಬೈ(ಸೆ.25): ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಕಣಕ್ಕಿಳಿದ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಶಾಕ್ ನೀಡಿದೆ. ಮೊದಲ ಪಂದ್ಯವನ್ನು ಟೈ ಮಾಡಿಕೊಂಡು ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಬಲಿಷ್ಠ CSK ತಂಡವನ್ನು ಸೋಲಿಸಿ, ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
176 ರನ್ ಟಾರ್ಗೆಟ್ ಚೆನ್ನೈ ತಂಡಕ್ಕೆ ಅಸಾಧ್ಯವೇನಲ್ಲ. ಆದರೆ ಡೆಲ್ಲಿ ಬೌಲಿಂಗ್ ದಾಳಿ ಎದುರು CSK ಆರಂಭದಲ್ಲೇ ಪರದಾಡಿತು. ಮುರಳಿ ವಿಜಯ್ ಹಾಗೂ ಶೇನ್ ವ್ಯಾಟ್ಸನ್ ರನ್‌ಗಳಿಸಲು ಪರದಾಡಿದರು. ಆರಂಭಿಕರಿಂದ ಕೇವಲ 23 ರನ್ ಜೊತೆಯಾಟ ಮೂಡಿಬಂತು. 34 ರನ್‌ಗಳೊಳಗೆ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡರು.
ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಫಾಫ್ ಡುಪ್ಲೆಸಿಸ್ ಏಕದಿನ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದರು. ವಿಕೆಟ್ ಉಳಿಸಿಕೊಂಡು ರನ್ ಗಳಿಸಲು ಡುಪ್ಲೆಸಿಸ್ ಸಕಲ ಪ್ರಯತ್ನ ಮಾಡಿದರು. ಆದರೆ ರುತುರಾಜ್ ಗಾಯಕ್ವಾಡ್ ಆಸರೆಯಾಗಲಿಲ್ಲ. ಕೇದಾರ್ ಜಾಧವ್ 26 ರನ್ ಸಿಡಿಸಿ ಔಟಾದರು. ಇತ್ತ ಆಸರೆಯಾಗಿದ್ದ ಡುಪ್ಲೆಸಿಸ್ 43 ರನ್ ಸಿಡಿಸಿ ಔಟಾದರು.
ನಾಯಕ ಧೋನಿ ಹಾಗೂ ರವೀಂದ್ರ ಜಡೇಜಾ ಬಿರುಸಿನ ಹೊಡೆತಕ್ಕೆ ಮುಂದಾದರು. ಆದರೆ ಉತ್ತಮ ಜೊತೆಯಾಟ ಮೂಡಿ ಬರದ ಕಾರಣ ಚೆನ್ನೈ ಸೋಲಿನತ್ತ ವಾಲಿತು. ಅಂತಿಮ 6 ಎಸೆತದಲ್ಲಿ ಚೆನ್ನೈ ಗೆಲುವಿಗೆ 49 ರನ್ ಅವಶ್ಯಕತೆ ಇತ್ತು. ಧೋನಿ 15 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಚೆನ್ನೈ 7 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿ ಶರಣಾಯಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ 44 ರನ್ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.