ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವಿಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಶಾರ್ಜಾ(ಅ.17): ಸತತ ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಪಂದ್ಯದಲ್ಲಿ ಜಯಿಸಿ ಜಯದ ಹಳಿಗೆ ವಾಪಸಾಗಿದ್ದರೂ, ಎಂ.ಎಸ್.ಧೋನಿ ಪಡೆ ಮೇಲಿರುವ ಒತ್ತಡ ಕಡಿಮೆಯಾಗಿಲ್ಲ. ಶನಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂಪರ್ ಕಿಂಗ್ಸ್ಗೆ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಎದುರಾಗಲಿದೆ. ಚೆನ್ನೈ ಈಗಾಗಲೇ 8 ಪಂದ್ಯಗಳಲ್ಲಿ 5 ಸೋಲು ಕಂಡಿದ್ದು, ಮುಂದಿನ 6 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಿ ಜಯಿಸಬೇಕಿದೆ.
ಸನ್ರೈಸರ್ಸ್ ವಿರುದ್ಧ ಗೆಲುವಿನಲ್ಲಿ ಧೋನಿ ಬಳಸಿದ ಎಲ್ಲಾ ತಂತ್ರಗಳು ಕೈಹಿಡಿದವು. ಸ್ಯಾಮ್ ಕರ್ರನ್ ಆರಂಭಿಕನಾಗಿ ಆಡಿ ಯಶಸ್ಸು ಕಂಡರು. 7 ಬೌಲರ್ಗಳನ್ನು ಆಡಿಸಿದ್ದರಿಂದ ಸನ್ರೈಸರ್ಸ್ ರನ್ರೇಟ್ ನಿಯಂತ್ರಿಸಲು ಸಾಧ್ಯವಾಯಿತು. ಇದೇ ತಂತ್ರಗಾರಿಕೆಯನ್ನು ಧೋನಿ ಈ ಪಂದ್ಯದಲ್ಲೂ ಮುಂದುವರಿಸುವ ನಿರೀಕ್ಷೆ ಇದೆ.
KKR ನಾಯಕತ್ವ ಬದಲಾದರೂ ಫಲಿತಾಂಶ ಬದಲಾಗಲಿಲ್ಲ; ಮುಂಬೈಗೆ 8 ವಿಕೆಟ್ ಗೆಲುವು!
ಮತ್ತೊಂದೆಡೆ ಡೆಲ್ಲಿ ಜಯ ಸಾಧಿಸಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ. ಆದರೆ ನಾಯಕ ಶ್ರೇಯಸ್ ಅಯ್ಯರ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ರಿಷಭ್ ಪಂತ್ ಸೇವೆ ಅಲಭ್ಯವಾಗಿದೆ. ಹೀಗಾಗಿ ಡೆಲ್ಲಿ ಬ್ಯಾಟಿಂಗ್ ಪಡೆ ಕೊಂಚ ದುರ್ಬಲವಾದಂತೆ ಕಾಣುತ್ತಿದೆ. ಆದರೆ ಸ್ಪಿನ್ನರ್ಸ್ ಹಾಗೂ ವೇಗಿಗಳು ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಆರಂಭಿಕ ಪಂದ್ಯಗಳಲ್ಲಿ ಇದ್ದಂತಿಲ್ಲ. ಪಿಚ್ ವೇಗ ಕಳೆದುಕೊಂಡಿದ್ದು, ಚೆಂಡು ಬ್ಯಾಟ್ಗೆ ಸುಲಭವಾಗಿ ಸಿಗುವುದಿಲ್ಲ. ಸ್ಪಿನ್ನರ್ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮೊದಲು ಬ್ಯಾಟ್ ಮಾಡುವ ತಂಡ 180ಕ್ಕಿಂತ ದೊಡ್ಡ ಮೊತ್ತ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಸ್ಯಾಮ್ ಕರ್ರನ್, ಶೇನ್ ವಾಟ್ಸನ್, ಫಾಫ್ ಡು ಪ್ಲೆಸಿ, ಅಂಬಟಿ ರಾಯುಡು, ಎಂ.ಎಸ್.ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕರಣ್ ಶರ್ಮಾ, ಪೀಯೂಷ್ ಚಾವ್ಲಾ.
ಡೆಲ್ಲಿ: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ಅಜಿಂಕ್ಯ ರಹಾನೆ, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕೇರಿ, ಆರ್.ಅಶ್ವಿನ್, ಅಕ್ಷರ್ ಪಟೇಲ್, ಕಗಿಸೋ ರಬಾಡ, ತುಷಾರ್ ದೇಶಪಾಂಡೆ, ಏನ್ರಿಚ್ ನೋಕಿಯ.
ಸ್ಥಳ: ಶಾರ್ಜಾ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್