
ಅಬುಧಾಬಿ(ನ.01): ಯುವ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಟೂರ್ನಿಯಲ್ಲಿ ಬಾರಿಸಿದ ಹ್ಯಾಟ್ರಿಕ್ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಚೆನ್ನೈನ ಈ ಗೆಲುವು ಕೆ.ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಪ್ಲೇ ಆಫ್ ಪ್ರವೇಶಿಸುವ ಕನಸಿಗೆ ತಣ್ಣೀರೆರಚಿದೆ. ಚೆನ್ನೈ ಈಗಾಗಲೇ ಪ್ಲೇ ಆಫ್ ರೇಸಿನಿಂದ ಹೊರಬಿದ್ದಿತ್ತು, ಇದೀಗ ತನ್ನೊಂದಿಗೆ ಪಂಜಾಬ್ ತಂಡವನ್ನು ಮುಳುಗಿಸಿದೆ.
ಹೌದು, ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನೀಡಿದ್ದಂತಹ 154 ರನ್‌ಗಳ ಗುರಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸವಾಲಾಗಲೇ ಇಲ್ಲ. ಮೊದಲ ವಿಕೆಟ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಜೋಡಿ 9.5 ಓವರ್‌ಗಳಲ್ಲಿ 82 ರನ್‌ಗಳ ಜತೆಯಾಟವಾಡಿತು. ಉತ್ತಮವಾಗಿ ಆಡುತ್ತಿದ್ದ ಫಾಫ್ ಕೇವಲ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 48 ರನ್ ಬಾರಿಸಿ ಕೇವಲ 2 ರನ್ ಅಂತರದಲ್ಲಿ ಅರ್ಧಶತಕ ವಂಚಿತರಾದರು.
ಮುಂದುವರೆದ ಋತುರಾಜ್ ಅಬ್ಬರ: ಈ ವೇಳೆ ಎರಡನೇ ವಿಕೆಟ್‌ಗೆ ಜತೆಯಾದ ಋತುರಾಜ್ ಗಾಯಕ್ವಾಡ್ ಹಾಗೂ ಅಂಬಟಿ ರಾಯುಡು ಜೋಡಿ ಕೂಡಾ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಪಂಜಾಬ್ ಬೌಲರ್‌ಗಳನ್ನು ದಂಡಿಸಿದರು. ಕೆ. ಎಲ್. ರಾಹುಲ್ ಬೌಲಿಂಗ್‌ನಲ್ಲಿ ಸಾಕಷ್ಟು ಪರಿವರ್ತನೆ ಮಾಡಿದರೂ ಯಾವುದೇ ಯಶಸ್ಸು ದಕ್ಕಲಿಲ್ಲ. ಋತುರಾಜ್ ಗಾಯಕ್ವಾಡ್ ಕೇವಲ 39 ಎಸೆತಗಳಲ್ಲಿ ತಮ್ಮ ಮೂರನೇ ಐಪಿಎಲ್ ಅರ್ಧಶತಕ ಬಾರಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪರ ಸತತ ಮೂರು ಅರ್ಧಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಗೌರವಕ್ಕೆ ಗಾಯಕ್ವಾಡ್ ಪಾತ್ರರಾದರು.
ಅಂತಿಮವಾಗಿ ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 72 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ 9 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಗಾಯಕ್ವಾಡ್ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 62 ರನ್ ಬಾರಿಸಿದರೆ, ಅಂಬಟಿ ರಾಯುಡು 28 ಎಸೆತಗಳಲ್ಲಿ 2 ಬೌಂಡರಿ ಸಹಿತ 28 ರನ್ ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಕಿಂಗ್ಸ್ ಇಲೆವನ್ ಪಂಜಾಬ್ ಉತ್ತಮ ಆರಂಭದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಪದೇ ಪದೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯಲ್ಲಿ ದೀಪಕ್ ಹೂಡಾ 30 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.
ಈ ಸೋಲಿನೊಂದಿಗೆ ಎರಡು 'ಕಿಂಗ್ಸ್' ತಂಡಗಳು ಪ್ಲೇ ಆಫ್ ರೇಸಿನಿಂದ ಹೊರಬಿದ್ದಂತೆ ಆಗಿದೆ. ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಿಂದ ಹೊರಬಿದ್ದಿತ್ತು, ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ಕೂಡಾ ತನ್ನ ಅಭಿಯಾನ ಅಂತ್ಯಗೊಳಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.