ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಚೀನಿ ಮೊಬೈಲ್ ತಯಾರಿಕ ಕಂಪನಿ ವಿವೋ ಹೊರಬಿದ್ದಿರುವುದನ್ನು ಬಿಸಿಸಿಐ ಖಚಿತಪಡಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.06): ಚೀನಿ ಉತ್ಫನ್ನಗಳ ಬಾಯ್ಕಾಟ್ ಅಭಿಯಾನ ಜೋರಾಗುತ್ತಿರುವ ಬೆನ್ನಲ್ಲೇ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ವಿವೋದೊಂದಿಗಿನ ಒಪ್ಪಂದವನ್ನು ರದ್ದು ಪಡಿಸಿರುವುದಾಗಿ ಬಿಸಿಸಿಐ ಖಚಿತಪಡಿಸಿದೆ.
ಐಪಿಎಲ್ ಆಯೋಜನೆ ಖಚಿತವಾಗುತ್ತಿದ್ದಂತೆ ಚೀನಿ ಮೊಬೈಲ್ ತಯಾರಿಕಾ ಕಂಪನಿಯಾದ ವಿವೋದೊಂದಿಗಿನ ಒಪ್ಪಂದವನ್ನು ಕಡಿತಮಾಡಿಕೊಳ್ಳಿ ಎನ್ನುವ ಆಗ್ರಹ ಜೋರಾಗಿತ್ತು. ಇದರ ಬೆನ್ನಲ್ಲೇ ಕೆಲವು ದಿನಗಳ ಹಿಂದಷ್ಟೇ ವಿವೋ ಮೊಬೈಲ್ ತಯಾರಿಕ ಕಂಪನಿ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ತಿಳಿಸಿತ್ತು.
ವಿವೋ ಕಂಪನಿಯು ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕಾಗಿ 5 ವರ್ಷದ ಅವಧಿಗೆ 2018ರಲ್ಲಿ 2,199 ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿತ್ತು. 2020ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ ಎಂದು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ತಿಳಿಸಿದೆ.
IPL 2020 ಟೈಟಲ್ ಪ್ರಾಯೋಜಕತ್ವದಿಂದ ವಿವೋ ಔಟ್; ಹೊಸ ಸ್ಪಾನ್ಸರ್‌ಗೆ ಹುಡುಕಾಟ!
ಗವರ್ನಿಂಗ್ ಕೌನ್ಸಿಲ್ ಸಭೆಯ ಬಳಿಕ ನಾವು(ಬಿಸಿಸಿಐ ಮತ್ತು ವಿವೋ) ಕುಳಿತುಕೊಂಡು ಒಂದು ವರ್ಷದ ಅವಧಿಗೆ ಒಪ್ಪಂದವನ್ನು ರದ್ದುಪಡಿಸುವ ತೀರ್ಮಾನಕ್ಕೆ ಬರಲಾಗಿದೆ. ನಾವು 2023ರ ಬಳಿಕ ಇನ್ನೊಂದು ವರ್ಷ ವಿಸ್ತರಿಸುವ ಬಗ್ಗೆಯೂ ಯೋಚಿಸುತ್ತೇವೆ. ಈ ವಿಚಾರವು ಸೌಹಾರ್ಧಯುತವಾಗಿ ಬಗೆಹರಿದಿದೆ ಬಿಸಿಸಿಐ ಅಧಿಕೃತ ಮೂಲಗಳು ತಿಳಿಸಿವೆ.