IPL 2020: ವಿವೋ ಔಟ್, ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಮುಂದಾದ ಪತಾಂಜಲಿ

Suvarna News   | Asianet News
Published : Aug 10, 2020, 05:31 PM ISTUpdated : Aug 10, 2020, 05:41 PM IST
IPL 2020: ವಿವೋ ಔಟ್, ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ಮುಂದಾದ ಪತಾಂಜಲಿ

ಸಾರಾಂಶ

IPL 2020 ಟೈಟಲ್ ಪ್ರಾಯೋಜಕತ್ವದಿಂದ ಚೀನಾ ಕಂಪನಿ ವಿವೋ ಹಿಂದೆ ಸರಿದ ಬೆನ್ನಲ್ಲೇ ಇದೀಗ ದೇಸಿ ಆಯುರ್ವೇದಿಕ್ ಕಂಪನಿಯಾದ ಬಾಬಾ ರಾಮ್‌ದೇವ್‌ ಅವರ ಪತಾಂಜಲಿ ಕಂಪನಿ ಐಪಿಎಲ್ ಪ್ರಾಯೋಜಕತ್ವಕ್ಕೆ ಮುಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಆ.10): ಮುಂಬರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಟೈಟಲ್ ಪ್ರಾಯೋಜಕತ್ವ ಪಡೆಯಲು ಬಾಬಾ ರಾಮ್‌ದೇವ್ ಅವರ ಪತಾಂಜಲಿ ಆಯುರ್ವೇದ ಸಂಸ್ಥೆ ಆಸಕ್ತಿ ತೋರಿಸಿದೆ. ಚೀನಾ ಮೊಬೈಲ್ ತಯಾರಿಕಾ ಕಂಪನಿ ವಿವೋ ಈ ವರ್ಷದ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದರಿಂದ ಬಿಸಿಸಿಐ ಪ್ರಾಯೋಜಕತ್ವಕ್ಕಾಗಿ ಬಿಡ್ ಆಹ್ವಾನಿಸಿದೆ.

ಒಂದು ವೇಳೆ ಟೈಟಲ್ ಪ್ರಾಯೋಜಕತ್ವದ ಹಕ್ಕು ಪಡೆದರೆ ಹರಿದ್ವಾರ ಮೂಲದ ಕಂಪನಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆದಂತೆ ಆಗುತ್ತದೆ. ಜೊತೆಗೆ ತಮ್ಮ ಬ್ರ್ಯಾಂಡ್ ಪ್ರಚಾರ ಮಾಡಲು ಅನುಕೂಲವಾಗುತ್ತದೆ ಎನ್ನುವುದು ಪತಾಂಜಲಿ ಸಂಸ್ಥೆಯ ಲೆಕ್ಕಾಚಾರವಾಗಿದೆ.

2020ರ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ವಿಚಾರವನ್ನು ಪತಾಂಜಲಿ ಸಂಸ್ಥೆಯ ಮಾಧ್ಯಮ ವಕ್ತಾರ ಎಸ್‌.ಕೆ. ತೈಜರವಾಲಾ ಖಚಿತ ಪಡಿಸಿದ್ದಾರೆ. "ಹೌದು, ನಾವು ಈ ಬಗ್ಗೆ ಆಲೋಚಿಸುತ್ತಿದ್ದೇವೆ. ದೇಸಿ ಉತ್ಪನ್ನವೊಂದು ಜಾಗತಿಕ ಮಟ್ಟದಲ್ಲಿ ಮಿಂಚಲು ಈ ಐಪಿಎಲ್ ವೇದಿಕೆ ಉತ್ತಮ ಅವಕಾಶವಾಗಿದೆ. ಇದು ನಮ್ಮ ಗಮನದಲ್ಲಿದೆ ಎಂದು ತೈಜರವಾಲಾ ತಿಳಿಸಿದ್ದಾರೆ. ಆದರೆ ಈ ಕುರಿತಂತೆ ಸದ್ಯ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಆದರೆ ಸದ್ಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು  ತೈಜರವಾಲಾ ತಿಳಿಸಿದ್ದಾರೆ. 

ಚೀನಾ ಪ್ರಾಯೋಜಕತ್ವ ಹಿಂದೆ ಸರಿದ ಬಳಿಕ ಬಿಸಿಸಿಐ ಬಿಗ್‌ಬಾಸ್ ಸೌರವ್ ಗಂಗೂಲಿ ಪ್ರತಿಕ್ರಿಯೆ!

ಲಡಾಖ್ ಗಡಿಯಾದ ಗಲ್ವಾನ್ ಪ್ರದೇಶದಲ್ಲಿ ನಡೆದ ಭಾರತ-ಚೀನಿ ಸೈನಿಕರ ಘರ್ಷಣೆಯಲ್ಲಿ ಭಾರತದ 20 ಯೋಧರು ಪ್ರಾಣ ಕಳೆದುಕೊಂಡಿದ್ದರು. ಇದರ ಬೆನ್ನಲ್ಲೇ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎನ್ನುವ ಕೂಗು ಜೋರಾಗಿತ್ತು. ಅಂತಿಮವಾಗಿ ಕಳೆದ ವಾರ ಬಿಸಿಸಿಐ ಹಾಗೂ ವಿವೋ ಕಂಪನಿಗಳು ಚರ್ಚೆ ನಡೆಸಿ ಒಪ್ಪಂದದಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಬಂದಿದ್ದವು.

2018ರಿಂದ 2022ರ ಅವಧಿಗೆ 2,190 ಕೋಟಿ ರುಪಾಯಿಗೆ ವಿವೋ ಕಂಪನಿಯು ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿತ್ತು. ಅಂದರೆ ಬಿಸಿಸಿಗೆ ವಾರ್ಷಿಕ ಸರಿ ಸುಮಾರು 440 ಕೋಟಿ ರುಪಾಯಿ ಹಣವನ್ನು ನೀಡುತಿತ್ತು. 

ಹರಿದ್ವಾರ ಮೂಲದ ಪತಾಂಜಲಿ ಗ್ರೂಪ್ ಕಂಪನಿಯು ವಾರ್ಷಿಕ 10,500 ಕೋಟಿ ರುಪಾಯಿ ವ್ಯವಹಾರ ನಡೆಸುತ್ತದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ 2018-19ನೇ ಸಾಲಿನಲ್ಲಿ 8,329 ಕೋಟಿ ರುಪಾಯಿ ಆದಾಯವನ್ನು ಗಳಿಸಿತ್ತು.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಐಪಿಎಲ್ ಹರಾಜಿನಿಂದ ಹಿಂದೆ ಸರಿದ ಮತ್ತಿಬ್ಬರು ಸ್ಟಾರ್ ಆಲ್ರೌಂಡರ್ಸ್!
IPL 2026 ಆಟಗಾರರ ಹರಾಜಿನ ಲಿಸ್ಟ್‌ ಫೈನಲ್: 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರ ಪಟ್ಟಿ ಔಟ್, ಕೇವಲ 2 ಭಾರತೀಯರಿಗೆ ಸ್ಥಾನ!