FATF, ವಿಶ್ವಬ್ಯಾಂಕ್‌ಗೆ ಮನವಿ, ಪಾಕಿಸ್ತಾನದ ಅರ್ಥಿಕತೆ ಮೇಲೆ ಸ್ಟ್ರೈಕ್‌ ಮಾಡಲು ಮುಂದಾದ ಭಾರತ!

Published : May 23, 2025, 04:20 PM ISTUpdated : May 23, 2025, 04:56 PM IST
PM Narendra Modi

ಸಾರಾಂಶ

ಜೂನ್‌ನಲ್ಲಿ ಪಾಕಿಸ್ತಾನಕ್ಕೆ 20 ಬಿಲಿಯನ್ ಯುಎಸ್ ಡಾಲರ್ ಪ್ಯಾಕೇಜ್‌ಗೆ ಅನುಮೋದನೆ ನೀಡುವ ನಿರೀಕ್ಷೆಯನ್ನು ಮರುಪರಿಶೀಲಿಸುವಂತೆ ಭಾರತ ವಿಶ್ವಬ್ಯಾಂಕ್ ಅನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ. 

ನವದೆಹಲಿ (ಮೇ.23): ಸಾಲಗಳು ಮತ್ತು ಬೇಲ್‌ಔಟ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಇನ್ನಷ್ಟು ದೊಡ್ಡ ಸ್ಟ್ರೈಕ್‌ ಮಾಡಲು ಭಾರತ ಯೋಜಿಸುತ್ತಿರುವುದರಿಂದ ವಿಶ್ವಬ್ಯಾಂಕ್ ಮತ್ತು ಭಯೋತ್ಪಾದಕ ಹಣಕಾಸು ಕಣ್ಗಾವಲು ಸಂಸ್ಥೆ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅನ್ನು ಸಂಪರ್ಕಿಸಲು ಸಜ್ಜಾಗಿದೆ. ಜೂನ್‌ನಲ್ಲಿ ಪಾಕಿಸ್ತಾನಕ್ಕೆ 20 ಬಿಲಿಯನ್ ಯುಎಸ್ ಡಾಲರ್ ಪ್ಯಾಕೇಜ್‌ಗೆ ಅನುಮೋದನೆ ನೀಡುವ ನಿರೀಕ್ಷೆಯನ್ನು ಮರುಪರಿಶೀಲಿಸುವಂತೆ ಭಾರತ ವಿಶ್ವಬ್ಯಾಂಕ್ ಅನ್ನು ಕೇಳಲಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನವನ್ನು ಮತ್ತೆ ಗ್ರೇ ಲಿಸ್ಟ್‌ಗೆ ಸೇರಿಸಲು ಭಾರತವು FATF ಅನ್ನು ಸಕ್ರಿಯವಾಗಿ ಫಾಲೋ ಮಾಡಲಿದೆ.. ಇದು ಪಾಕಿಸ್ತಾನದ ಹಣಕಾಸು ವಹಿವಾಟುಗಳ ಮೇಲಿನ ಪರಿಶೀಲನೆಯನ್ನು ಹೆಚ್ಚಿಸುತ್ತದೆ, ವಿದೇಶಿ ಹೂಡಿಕೆಗಳು ಮತ್ತು ಬಂಡವಾಳದ ಒಳಹರಿವುಗಳನ್ನು ನಿರ್ಬಂಧಿಸುವ ಸಾಧ್ಯತೆಯಿದೆ.

ಪಾಕಿಸ್ತಾನವನ್ನು ಜೂನ್ 2018 ರಲ್ಲಿ FATF 'ಬೂದು ಪಟ್ಟಿ'ಗೆ ಸೇರಿಸಲಾಯಿತು. ಆದರೆ, ಭಯೋತ್ಪಾದಕ ನಿಧಿಯನ್ನು ತಡೆಯಲು ಸರ್ಕಾರ ಬದ್ಧವಾದ ನಂತರ ಅಕ್ಟೋಬರ್ 2022 ರಲ್ಲಿ ಅದನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಜೈಲಿಗೆ ಹಾಕಿದ್ದಲ್ಲದೆ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.

ಆಪರೇಷನ್‌ ಸಿಂದೂರ ಉತ್ತುಂಗದಲ್ಲಿದ್ದಾಗಲೇ ಮೇ 9 ರಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪಾಕಿಸ್ತಾನಕ್ಕೆ ನೀಡಿದ 1 ಬಿಲಿಯನ್ ಡಾಲರ್ (ಸುಮಾರು 8,500 ಕೋಟಿ ರೂ.) ಬೇಲ್ ಔಟ್ ಪ್ಯಾಕೇಜ್‌ನಿಂದ ಸರ್ಕಾರ ನಿರಾಶೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಎಫ್‌ಎಟಿಎಫ್‌ ಗ್ರೇ ಲಿಸ್ಟ್‌ ಎಂದರೆ, ಭಯೋತ್ಪಾದನೆಗೆ ನೆರವು ನೀಡುವ ರಾಷ್ಟ್ರಗಳ ಮೇಲೆ ಮೇಲ್ವಿಚಾರಣೆಯಲ್ಲಿದೆ ಎಂದರ್ಥ. ಒಂದು ದೇಶವನ್ನು ಈ ಪಟ್ಟಿಯಡಿಯಲ್ಲಿ ಇರಿಸಿದಾಗ, ಅದು "ಒಪ್ಪಿದ ಸಮಯದ ಚೌಕಟ್ಟಿನೊಳಗೆ ಎಫ್‌ಎಟಿಎಫ್‌ ನೀಡಲಾಗುವ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಪರಿಹರಿಸಬೇಕು ಎಂದರ್ಥ. ಪ್ರಸ್ತುತ, FATF ನ "ಹೆಚ್ಚಿದ ಮೇಲ್ವಿಚಾರಣೆಯಲ್ಲಿರುವ ನ್ಯಾಯವ್ಯಾಪ್ತಿ", ಅಂದರೆ, "ಬೂದು ಪಟ್ಟಿ"ಯ ಅಡಿಯಲ್ಲಿ 25 ದೇಶಗಳನ್ನು ಪಟ್ಟಿ ಮಾಡಲಾಗಿದೆ. 2022 ರಲ್ಲಿ, ಪಾಕಿಸ್ತಾನವನ್ನು FATF ಬೂದು ಪಟ್ಟಿಯಿಂದ ತೆಗೆದುಹಾಕಲಾಯಿತು. ಆ ಬಳಿಕವೇ ಪಾಕಿಸ್ತಾನಕ್ಕೆ ಐಎಂಎಫ್‌ನಿಂದ ಸಾಲಗಳು ಸಿಗುವ ಪ್ರಕ್ರಿಯೆ ಆರಂಭವಾಗಿತ್ತು.

ಪಾಕಿಸ್ತಾನಕ್ಕೆ ಮುಂಬರುವ ವಿಶ್ವಬ್ಯಾಂಕ್ ಹಣಕಾಸು ನೆರವನ್ನು ಭಾರತ ವಿರೋಧಿಸಲಿದೆ ಎಂದು ಮೂಲಗಳು ತಿಳಿಸಿವೆ. ಪರಮಾಣು ಶಸ್ತ್ರಸಜ್ಜಿತ ನೆರೆಯ ರಾಷ್ಟ್ರಗಳ ನಡುವೆ ಇತ್ತೀಚೆಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ನಡುವೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ತನ್ನ $1 ಬಿಲಿಯನ್ ಬೇಲ್‌ಔಟ್ ಅನ್ನು ಸಮರ್ಥಿಸಿಕೊಂಡಿದೆ ಮತ್ತು ಇತ್ತೀಚಿನ ಸಾಲದ ಕಂತು ಪಡೆಯಲು ಇಸ್ಲಾಮಾಬಾದ್ "ಅಗತ್ಯವಿರುವ ಎಲ್ಲಾ ಗುರಿಗಳನ್ನು ತಲುಪಿದೆ" ಎಂದು ಹೇಳಿದೆ. ಸೆಪ್ಟೆಂಬರ್ 2024 ರಲ್ಲಿ ಅನುಮೋದಿಸಲಾದ ವಿಸ್ತೃತ ನಿಧಿ ಸೌಲಭ್ಯ ಕಾರ್ಯಕ್ರಮದ ಅಡಿಯಲ್ಲಿ, ಪಾಕಿಸ್ತಾನ ಸುಮಾರು $2.1 ಬಿಲಿಯನ್ ಪಡೆದಿದೆ.

ಎಫ್‌ಎಟಿಎಫ್‌ ಬ್ಲ್ಯಾಕ್‌ & ಗ್ರೇ ಲಿಸ್ಟ್‌ನಲ್ಲಿರುವ ದೇಶಗಳು: ಪ್ರಸ್ತುತ ಉತ್ತರ ಕೊರಿಯಾ, ಇರಾನ್‌ ಹಾಗೂ ಮಯನ್ಮಾರ್‌ ದೇಶಗಳು ಎಫ್‌ಎಟಿಎಫ್‌ನ ಬ್ಲ್ಯಾಕ್‌ ಲಿಸ್ಟ್‌ನಲ್ಲಿದ್ದರೆ, ಅಲ್ಜೀರಿಯಾ, ಅಂಗೋಲಾ, ಬಲ್ಗೇರಿಯಾ, ಬುರ್ಕಿನಾ ಫಾಸೊ

ಕ್ಯಾಮರೂನ್, ಕೋಟ್ ಡಿ'ಐವೊಯಿರ್, ಕ್ರೊಯೇಷಿಯಾ, ಕಾಂಗೋ, ಹೈಟಿ, ಕೀನ್ಯಾ, ಲಾವೋ, ಲೆಬನಾನ್, ಮಾಲಿ, ಮೊನಾಕೊ, ಮೊಜಾಂಬಿಕ್, ನಮೀಬಿಯಾ, ನೇಪಾಳ, ನೈಜೀರಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಸುಡಾನ್, ಸಿರಿಯಾ, ಟಾಂಜಾನಿಯಾ, ವೆನೆಜುವೆಲಾ, ವಿಯೆಟ್ನಾಂ ಹಾಗೂ ಯೆಮೆನ್ ದೇಶಗಳು ಗ್ರೇ ಲಿಸ್ಟ್‌ನಲ್ಲಿವೆ.

PREV
Read more Articles on
click me!

Recommended Stories

ಸಂತ ಕಬೀರ ನಗರದಲ್ಲಿ ಯೋಗಿ ಭರ್ಜರಿ ಘೋಷಣೆ
ಗಢ ಗಢ ನಡುಗಿದ ಅನುಭವ; ನೋಡಿದ್ರೆ ಕುಸಿದ ಬಾವಿ, ವಿಡಿಯೋ ವೈರಲ್