
ಕರಾವಳಿ ಮಲೆನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗೆ ಜೋರಾಗಿ ಸುರಿಯುವ ಮಳೆಯಿಂದಾಗಿ ಸಮೀಪದ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತವೆ. ಹೊಳೆಗಳ ಸಮೀಪವೇ ತೆಂಗಿನ ಮರಗಳು, ಅಡಿಕೆ ಮರಗಳು ಇರುವುದು ಇಲ್ಲಿ ಸಾಮಾನ್ಯ, ಅಥವಾ ತೋಟಗಳಲ್ಲಿ, ಇರುವ ಕಣಿವೆಗಳ ನೀರು ಸೀದಾ ಹೋಗಿ ಈ ಹೊಳೆ ಹಳ್ಳಕೊಳ್ಳಗಳನ್ನು ಸೇರುತ್ತವೆ. ಹೀಗಾಗಿ ತೋಟದಲ್ಲಿರುವ ಅಡಿಕೆ, ತೆಂಗಿನ ಕಾಯಿಗಳು ಜೋರಾಗಿ ಸುರಿದ ಮಳೆ ಗಾಳಿಗೆ ಹೊಳೆಗೆ ಬಿದ್ದು ನೀರಿನ ಪ್ರವಾಹದಲ್ಲಿ ಮುಂದೆ ಸಾಗುತ್ತವೆ. ಹೀಗೆ ನೀರಿನಲ್ಲಿ ಸಿಕ್ಕ ತೆಂಗಿನಕಾಯಿ ಅಡಿಕೆಯನ್ನು ಹಿಡಿಯುವುದೇ ಮಳೆಗಾಲದಲ್ಲಿ ಅನೇಕರ ಹವ್ಯಾಸವಾಗಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ಕಡೆ ಇದು ಮಳೆಗಾಲದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ.
ಮಳೆ ಶುರುವಾಗುವ ಮೊದಲೇ ತೆಂಗಿನ ಕಾಯಿ ಕುಯ್ಸದಿದ್ದರೆ ಎಲ್ಲಾ ಹೊಳೆ ಪಾಲಾಗುತ್ತದೆ. ಹೀಗಾಗಿ ಮಳೆಗಾಲ ಶುರುವಾಗುವ ಮೊದಲೇ ಇಲ್ಲಿ ಕೃಷಿಕರು ತಮ್ಮ ತೋಟದಲ್ಲಿರುವ ತೆಂಗಿನಕಾಯಿಯನ್ನು ಮರದಿಂದ ಕುಯ್ಸಿಬಿಡುತ್ತಾರೆ. ಆದರೂ ಮಳೆಗೆ ತುಂಬಿ ಹರಿಯುವ ಹೊಳೆಯಲ್ಲಿ ತೆಂಗಿನಕಾಯಿಗಳಿಗೇನು ಬರವಿಲ್ಲ, ಜೋರಾಗಿ ಸುರಿಯುವ ಮಳೆ ಹಾಗೂ ಬಿರುಸಾದ ಗಾಳಿಗೆ ಮರದಲ್ಲಿರುವ ತೆಂಗಿನ ಕಾಯಿ ಕೆಳಗೆ ಬಿದ್ದು ಹಳ್ಳ ಸೇರುತ್ತವೆ. ಹೀಗಾಗಿ ಹೊಳೆಯ ಕೆಳಭಾಗದಲ್ಲಿ ತೆಂಗಿನ ಕಾಯಿ ಬರುತ್ತೆ ಅಂತ ಅನೇಕರು ಚೀಲ ಕೋಲು ಹಿಡಿದು ಕಾಯ್ತಾ ಕೂತಿರ್ತಾರೆ. ಇದು ಕರಾವಳಿ, ಮಲೆನಾಡು ಭಾಗದಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ. ಆದರೆ, ಇಲ್ಲೊಂದು ಕಡೆ ಹೊಳೆಯಲ್ಲಿ ಸಾಗಿ ಬರುವ ತೆಂಗಿನ ಕಾಯಿಯನ್ನು ನಾಯಿಯೂ ಓಡಿ ಓಡಿ ಹೋಗಿ ಹಿಡಿಯುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವೀಡಿಯೋ ನೋಡಿದರೆ ನೀವು ಕರಾವಳಿ, ಮಲೆನಾಡು ಭಾಗದವರಾದರೆ ನಿಮ್ಮ ಮೊಗದಲ್ಲಿ ನಗು ಮೂಡುವುದು ಬಾಲ್ಯ, ಹಳೆಯ ದಿನಗಳ ನೆನಪಾಗುವುದು ಸಾಮಾನ್ಯ. ಹೀಗೆ ಬಿಡದೇ ಸುರಿಯುವ ಮಳೆಗೆ ಹೊಳೆ ತುಂಬಿ ಹರಿಯುತ್ತಿದ್ದರೆ, ನಾಯಿಯೊಂದು ಈ ಹೊಳೆಯಲ್ಲಿ ಬರುವ ತೆಂಗಿನ ಕಾಯಿಯನ್ನು ಓಡಿ ಹೋಗಿ ಹಿಡಿಯುತ್ತಿದೆ. santhoshharikrishnan ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಣ್ಣಪುಟ್ಟ ಬೊಗಳುವ ಕಚ್ಚುವ ಆಟಗಳನ್ನೆಲ್ಲಾ ನಿಲ್ಲಿಸಿ ತೆಂಗಿನ ಕಾಯಿ ವ್ಯವಹಾರಕ್ಕೆ ಇಳಿದ ಡಾಗೇಶನ್ ಎಂದು ಮಲೆಯಾಳಂನಲ್ಲಿ ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಶ್ವಾನವೊಂದು ನೀರಿನಲ್ಲಿ ತೇಲಿ ಬಂದ 5ಕ್ಕೂ ಹೆಚ್ಚು ತೆಂಗಿನ ಕಾಯಿಗಳನ್ನು ಹಿಡಿದು ತೆಂಗಿನ ಮರದ ಬುಡದಲ್ಲಿ ತಂದು ರಾಶಿ ಹಾಕಿದೆ. ಮಾಲೀಕ ಕೋಲೊಂದನ್ನು ಬಳಸಿ ಹೊಳೆಯ ಮಧ್ಯದಲ್ಲಿ ಸಾಗುವ ತೆಂಗಿನ ಕಾಯಿಯನ್ನು ಪಕ್ಕಕ್ಕೆ ಸರಿಸಿದರೆ ಈ ಶ್ವಾನ ಅದನ್ನು ಹಾಗೆ ನೀರಿನಿಂದ ತೆಗೆದು ತಂದು ನೆಲದ ಮೇಲೆ ಇರಿಸುತ್ತಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಈ ಶ್ವಾನದ ಅದೃಷ್ಟವಂತ ಮಾಲೀಕ ಯಾರು ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇಡೀ ದಿನ ಬಹಳ ಶ್ರಮದಿಂದ ಕೆಲಸ ಮಾಡಲು ಈ ನಾಯಿ ನಿರ್ದರಿಸಿದಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಕಣ್ಣು ತಪ್ಪಿ ಒಂದೇ ಒಂದು ತೆಂಗಿನಕಾಯಿ ದೂರ ಹೋಗಬಾರದು ಎಂದು ಈ ಶ್ವಾನ ನಿರ್ಧರಿಸಿದಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಲೆ ಏರಿಕೆಯ ಈ ಸಮಯದಲ್ಲಿ ಜೀವನ ಮಾಡುವುದು ಹೇಗೆ ಎಂದು ಈ ಶ್ವಾನ ಚೆನ್ನಾಗಿ ಕಲಿತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ ವೈರಲ್ ಆಗಿದ್ದು, ನಾಯಿ ಮಾಲೀಕ ಅದಕ್ಕೆ ಚೆನ್ನಾಗಿ ತರಬೇತಿ ನೀಡಿದಂತಿದೆ. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ.