
ಕನ್ಯಾಕುಮಾರಿ (ಸೆ.26) ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯವಾಗಲು, ಉತ್ತಮ ಆದಾಯ ಪಡೆಯಲು, ಹೆಚ್ಚಿನ ಲೈಕ್ಸ್, ಕಮೆಂಟ್ಸ್ ಪಡೆಯಲು ಹಲವು ಕಸರತ್ತುಗಳನ್ನು ಮಾಡಲಾಗುತ್ತದೆ. ಪ್ರಮುಖವಾಗಿ ಕಂಟೆಂಟ್ ಕ್ರಿಯೇಟರ್ಸ್ ತಮ್ಮ ವೈಯುಕ್ತಿಕ ಬದುಕನ್ನೇ ವಿವರಿಸುತ್ತಾ ಉತ್ತಮ ಆದಾಯಗಳಿಸುತ್ತಿದ್ದಾರೆ. ಹೀಗಾಗಿ ಖ್ಯಾತ ಯೂಟ್ಯೂಬರ್ ವೈರಲ್ ರೀಲ್ಸ್ ಮಾಡಲು ಮನೆಯಲ್ಲಿದ್ದ ಕಂತೆ ಕಂತೆ ನೋಟುಗಳು, ಚಿನ್ನಾಭರಣ ಪ್ರದರ್ಶಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಜೊತೆಗೆ ಉತ್ತಮ ಕಮೆಂಟ್ಸ್ ವ್ಯಕ್ತವಾಗಿದೆ. ವಿಡಿಯೋದಿಂದ ಹಿರಿ ಹಿರಿ ಹಿಗ್ಗಿದ ಯೂಟ್ಯೂಬರ್ ಇದೀಗ ಕಣ್ಣೀರು ಹಾಕುತ್ತಿದ್ದಾರೆ.
ಭಾರಿ ವೈರಲ್ ವಿಡಿಯೋ ನೋಡಿದ ಕಳ್ಳರ ತಂಡ ಯೂಟ್ಯೂಬರ್ ಮನೆ ನುಗ್ಗಿ ಲಾಕರ್‌ನಲ್ಲಿಟ್ಟಿದ್ದ ಎಲ್ಲಾ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಕನ್ಯಾಕುಮಾರಿಯ ವಿನೋದ್ ಕುಮಾರ್ ಹಾಗೂ ಪತ್ನಿ ಇಬ್ಬರು ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ದಂಪತಿಗೆ ಪುಟ್ಟ ಮಗಳಿದ್ದಾಳೆ. ಇವರ ಹಲವು ವಿಡಿಯೋಗಳಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ವಿನೋದ್ ಕುಮಾರ್ ಹಾಗೂ ಪತ್ನಿ ಇಬ್ಬರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋ ಮಾಡುತ್ತಾ ಆದಾಯಗಳಿಸುತ್ತಿದ್ದಾರೆ. ಮನೆಯಲ್ಲಿರುವ ಕಂತೆ ಕಂತೆ ನೋಟುಗಳು, ಚಿನ್ನಾಭರಣ ಕುರಿತು ವಿನೋದ್ ಕುಮಾರ್ ಪತ್ನಿ ವಿಡಿಯೋ ಮಾಡಿದ್ದಾರೆ. ಪತಿ ವಿನೋದ್ ಕುಮಾರ್ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಇಬ್ಬರು ವಿಡಿಯೋ ಚಿತ್ರೀಕರಿಸಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮನೆಯ ಸಂಪತ್ತು, ಖುಷಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಶ್ರೀಮಂತಿಕೆ ಕಂಡು ಖುಷಿ ಪಟ್ಟಿದ್ದಾರೆ. ಆದರೆ ಈ ವಿಡಿಯೋ ನೋಡಿದ ಖದೀಮರ ತಂಡ ಯೂಟ್ಯೂಬರ್ ಮನೆಗೆ ಕನ್ನ ಹಾಕಿದೆ.
ಲಾಕರ್ ಮುರಿದು ಕಂತೆ ಕಂತೆ ನೋಟುಗಳು, ಬರೋಬ್ಬರಿ 994 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾರೆ. ಕಳ್ಳರು ರಾತ್ರಿ ವೇಳೆ ಹಿಂಬಾಗಿಲನ್ನು ಮುರಿದು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಲಾಕರ್ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮನೆಯಲ್ಲಿರುವ ಸಿಸಿಟಿವಿ, ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಚಿನ್ನಾಭರಣ, ನಗದು ಪ್ರದರ್ಶಿಸಿದ ವಿಡಿಯೋದಲ್ಲಿ ಸಂಪತ್ತಿನ ಕುರಿತ ಮಾತ್ರ ಮಾಹಿತಿ ಇತ್ತು. ಕಂತೆ ಕಂತೆ ನೋಟುಗಳು, ನೋಟಿನ ಸರಿಸುಮಾರು ಒಟ್ಟು ಮೌಲ್ಯ, ಚಿನ್ನಾಭರಣ, ಸರಗಳ ವಿಶೇಷತೆ, ತೂಕ ಸೇರಿದಂತೆ ಇತರ ಮಾಹಿತಿ ನೀಡಲಾಗಿತ್ತು. ಆದರೆ ಇದೇ ಯೂಟ್ಯೂಬರ್ ಇತರ ಕೆಲ ವಿಡಿಯೋದಲ್ಲಿ ತಮ್ಮ ಮನೆಯ ವಿಶೇಷತೆಗಳನ್ನು ಹೇಳಿದ್ದಾರೆ. ಮನೆಯ ಲೀವಿಂಗ್ ರೂಂ, ಬೆಡ್ ರೂಂ, ಕಿಚನ್ ಸೇರಿದಂತೆ ಇತರ ಕೋಣೆಗಳ ಮಾಹಿತಿ ನೀಡಿದ್ದರು. ಹೀಗಾಗಿ ಕಳ್ಳರು ಈ ಯೂಟ್ಯೂಬರ್ ಪೋಸ್ಟ್ ಮಾಡಿರುವ ಮನೆ, ವಠಾರ, ಮನೆಯೊಳಗಿನ ಕೋಣೆಗಳು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಗ್ಯಾಂಗ್‌ಗೆ ಕಳ್ಳತನ ಮಾಡುವ ಮೊದಲೇ ಮನೆಯೊಳಗೆ ಯಾವ ಭಾಗದಲ್ಲಿ ಏನಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಿತ್ತು. ಬೆಡ್ ರೂಂ, ಲಾಕರ್ ರೂಂ ಎಲ್ಲಿದೆ, ಲಾಕರ್ ರೂಂಗೆ ಬಳಸಿದ ಕಿ, ಅದರ ಲಾಕ್, ಅದನ್ನು ಹೇಗೆ ಮುರಿಯಬೇಕು ಅನ್ನೋದ ಎಲ್ಲಾ ಮಾಹಿತಿಯನ್ನು ಕಳ್ಳರ ಗ್ಯಾಂಗ್ ಕಲೆ ಹಾಕಿ ಮಿಂಚಿನ ವೇಗದಲ್ಲಿ ಕಳ್ಳತನ ಮಾಡಿತ್ತು. ಇದೀಗ ಯೂಟ್ಯೂಬರ್ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ