
ನವದೆಹಲಿ (ಜೂ.14): ಕೇಂದ್ರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಓಡಿಹೋದ ಘಟನೆ ಸೋಮವಾರ ನಡೆದಿದೆ. ಸೋಮವಾರ ಬೆಳಗ್ಗೆ ದಿಲ್ಲಿಯ ಇಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಶ್ರೀನಿವಾಸ್ ಕಾರಿನಲ್ಲಿ ಆಗಮಿಸಿದ್ದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆ ಪೊಲೀಸರೊಬ್ಬರು ಶ್ರೀನಿವಾಸ್‌ರನ್ನು ವಶಕ್ಕೆ ಪಡೆಯಲು ಯತ್ನಿಸಿದರು.
ಈ ವೇಳೆ ಅವರಿಗೆ ಚಳ್ಳೆಹಣ್ಣು ತಿನ್ನಿಸಿದ ಶ್ರೀನಿವಾಸ್ ಅಲ್ಲಿಂದ ಓಡಿಹೋದರು. ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿರುವ ಬಿಜೆಪಿ, ‘ಇದು ಕಾಂಗ್ರೆಸ್ಸಿಗರ ವೀರೋಚಿತ ಹೋರಾಟ’ ಎಂದು ವ್ಯಂಗ್ಯವಾಡಿದೆ. ಆದರೆ ಈ ಘಟನೆ ನಡೆದ ಕೆಲ ಹೊತ್ತಿನಲ್ಲಿ ಮತ್ತೆ ಶ್ರೀನಿವಾಸ್ ಇಡಿ ಕಚೇರಿ ಬಳಿ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಇತರೆ ನಾಯಕರ ಜೊತೆ ಶ್ರೀನಿವಾಸ್ ಅವರನ್ನೂ ಪೊಲೀಸರು ವಶಕ್ಕೆ ಪಡೆದರು.
ಬಿಜೆಪಿಯವರು ಉಡುಪಿಯಲ್ಲಿ ಪ್ರಯೋಗಶಾಲೆ ಮಾಡಿದ್ದಾರೆ: ಸೊರಕೆ
ಕಾಂಗ್ರೆಸ್ಸಿಂದ ಸರ್ಕಾರಿ ಕಚೇರಿ ಬಂದ್ ಎಚ್ಚರಿಕೆ: ದೆಹಲಿಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಸೋಮವಾರ ಬೆಂಗಳೂರಿನ ಜಾರಿ ನಿರ್ದೇಶನಾಲಯದ ಕಚೇರಿ (ಇ.ಡಿ) ಎದುರು ಬೃಹತ್ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮುಂದುವರೆಸಿದರೆ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಲಾಲ್‌ಬಾಗ್ ಮುಖ್ಯಗೇಟ್‌ನಿಂದ ಇ.ಡಿ. ಕಚೇರಿವರೆಗೂ ಪಾದಯಾತ್ರೆ ನಡೆಸಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಕಾರ್ಯಕರ್ತರೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು ಬ್ಯಾರಿಕೇಡ್ ತಳ್ಳಿಕೊಂಡು ಕಚೇರಿಯತ್ತ ನುಗ್ಗಲು ಪ್ರಯತ್ನಿಸಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಸೇರಿ ಕೆಲ ಕಾರ್ಯಕರ್ತರು ಬ್ಯಾರಿಕೇಡ್ ಹತ್ತಿದ್ದರಿಂದ ಹೈಡ್ರಾಮಾ ಸೃಷ್ಟಿಯಾಗಿತ್ತು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಂಧಿಸಿ ವಶಕ್ಕೆ ಪಡೆದರು.
ಸರ್ಕಾರಿ ಕಚೇರಿ ಬಂದ್ ಎಚ್ಚರಿಕೆ: ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರವು ಐ.ಟಿ., ಇ.ಡಿ.ಯಂತಹ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಧ್ವನಿ ಅಡಗಿಸಲು ಯತ್ನಿಸುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷವು ಎಂದಿಗೂ ಸಹಿಸುವುದಿಲ್ಲ. ನಮ್ಮ ನಾಯಕರಿಗೆ ಕಿರುಕುಳ ನೀಡಲು ಯತ್ನಿಸುತ್ತಿರುವ ಮೋದಿ ಸರ್ಕಾರದ ವಿರುದ್ಧ ಇದು ಸಾಂಕೇತಿಕ ಪ್ರತಿಭಟನೆ ಮಾತ್ರ. ಕೇಂದ್ರ ಇದೇ ಧೋರಣೆ ಮುಂದುವರೆಸಿದರೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್ ಶಾಸಕರಿಗೆ ಪತ್ರ!
ಮುಗಿದು ಹೋಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದ್ದಾರೆ. ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿದ್ದು, ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರನ್ನು ಜೈಲಿಗೆ ಕರೆದುಕೊಂಡು ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ