
ಅಲಪ್ಪುಳ: ಇತ್ತೀಚೆಗೆ ಎಐ ವೀಡಿಯೋಗಳ ಹಾವಳಿ ತೀವ್ರವಾಗಿ ಹೆಚ್ಚಾಗಿದೆ. ಯಾವುದು ನಿಜವಾದ ವೀಡಿಯೋ ಯಾವುದು ಸುಳ್ಳು ಎಂದು ಜನರಿಗೆ ಅದನ್ನು ಗುರುತು ಹಿಡಿಯುವುದಕ್ಕೂ ಅಸಾಧ್ಯ ಎಂಬಂತೆ ಈ ವೀಡಿಯೋಗಳಿರುತ್ತವೆ. ನಿಜವಾಗಿ ಸೆರೆಯಾದ ವೀಡಿಯೋಗಳೇ ನಾಚುವಂತೆ ಸತ್ಯದ ತಲೆಮೇಲೆ ಹೊಡೆದಂತೆ ಈ ವೀಡಿಯೋಗಳನ್ನು ಸೃಷ್ಟಿ ಮಾಡಲಾಗುತ್ತದೆ. ಹೀಗಾಗಿ ಜನರಿಗೆ ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಪತ್ತೆ ಮಾಡುವುದು ಕೂಡ ಸಾಧ್ಯವಾಗುತ್ತಿಲ್ಲ. ಈ ತಂತ್ರಜ್ಞಾನವನ್ನೇ ಬಳಸಿಕೊಂಡು ಕೆಲ ಕಿಡಿಗೇಡಿಗಳು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಏಷ್ಯನ್ ಮಾಲ್‌ಗೆ ಚಿರತೆ ಬಂದಿದೆ ಎಂಬಂತೆ ತೋರಿಸುವ ಎಐ ವೀಡಿಯೋವೊಂದು ವೈರಲ್ ಆಗಿತ್ತು. ಇದಕ್ಕೂ ಮೊದಲು ಹುಲಿಯೊಂದನ್ನು ಕುಡುಕ ಮುದ್ದಿಸುತ್ತಿದ್ದಾನೆ ಎಂದು ತೋರಿಸುವ ಎಐ ವೀಡಿಯೋ ವೈರಲ್ ಆಗಿತ್ತು. ಸಾಕಷ್ಟು ವೈರಲ್ ಆದ ನಂತರ ಇದು ನಿಜವಾದ ವೀಡಿಯೋ ಅಲ್ಲ ಎಂಬುದು ತಿಳಿದು ಬಂದಿತ್ತು.
ಅದೇ ರೀತಿ ಈಗ ಕೇರಳದ ವಯನಾಡ್‌ನಲ್ಲಿ ತಾಯಿ ಹಾಗೂ ಪುಟ್ಟ ಮಗು ಜೀಪ್‌ಲೈನ್ ಸಾಹಸ ಮಾಡ್ತಿದ್ದ ವೇಳೆ ಅಪಘಾತ ಉಂಟಾಗಿದೆ ಎಂಬಂತೆ ತೋರಿಸುವ ವೀಡಿಯೋವೊಂದನ್ನು ಎಐ ಟೂಲ್‌ಗಳನ್ನು ಬಳಸಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಜನರಿಗೆ ಭೀತಿ ಹುಟ್ಟಿಸಿದ ಕಾರಣಕ್ಕೆ ಯುವಕನೋರ್ವನನ್ನು ಬಂಧಿಸಲಾಗಿದೆ. 29 ವರ್ಷದ ಅಶ್ಕರ್ ಕೆ ಬಂಧಿತ ಆರೋಪಿ. ಈತ ಕೇರಳದ ಪ್ರವಾಸಿ ತಾಣವಾದ ವಯನಾಡಿನಲ್ಲಿ ಮಗು ಹಾಗೂ ತಾಯಿ ಜಿಪ್‌ಲೈನ್‌ನಲ್ಲಿ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಎಂದು ತೋರಿಸುವ ವೀಡಿಯೋ ಪೋಸ್ಟ್ ಮಾಡಿದ್ದ. ಈ ವೈರಲ್ ಆದ ಎಐ ವೀಡಿಯೋದಲ್ಲಿ ತಾಯಿ ಮಗು ಜಿಪ್‌ಲೈನ್ ಮಧ್ಯೆ ಸಿಲುಕಿದ್ದರೆ, ಆ ಜಿಪ್‌ಲೈನ್ ನಿರ್ವಾಹಕನೋರ್ವ ಪ್ರಪಾತಕ್ಕೆ ಬಿದ್ದಂತೆ ತೋರಿಸಲಾಗಿದೆ.
ಈ ವೀಡಿಯೋವನ್ನು ಆರೋಪಿ ಆಸ್ಕರ್, ತಾನೇ ಸೃಷ್ಟಿಸಿ 'ಅಶ್ಕರ್ ಅಲಿ ರಿಯಾಕ್ಟ್' ಎಂಬ ತನ್ನ ಇನ್ಸ್ಟಾಪೇಜ್‌ನಲ್ಲಿ ಪೋಸ್ಟ್ ಮಾಡಿದ್ದ, ವಯನಾಡ್‌ನಲ್ಲಿ ತಾಯಿ ಮಗು ಜಿಪ್‌ಲೈನ್ ಹೋಗುವ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಿಕೊಂಡಿದ್ದ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಅಲಪ್ಪುಳ ಜಿಲ್ಲೆಯ ತಿರುವಂಬಾಡಿಯ ಥೈವೇಲಿಕ್ಕಂ ಮನೆಯ ಕೆ. ಅಶ್ಕರ್‌ನನ್ನು ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್ ಎಸ್‌ಎಚ್‌ಒ ಶಾಜು ಜೋಸೆಫ್ ನೇತೃತ್ವದ ಪೊಲೀಸ್ ತಂಡವು ಆಶ್ಕರ್‌ನನ್ನು ಬಂಧಿಸಿದೆ.
ಕೇರಳದ ಪ್ರವಾಸಿ ತಾಣವಾದ ವಯನಾಡಿನಲ್ಲಿ ಈ ರೀತಿ ಅಪಘಾತವಾಗಿದೆ ಎಂದು ಬಿಂಬಿಸುವ ಎಐ ವೀಡಿಯೋವನ್ನು ಸೃಷ್ಟಿಸಿ ಪೋಸ್ಟ್ ಮಾಡಿದ್ದರಿಂದ ಕೇರಳದ ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ. ತಾಯಿಯೊಬ್ಬರು ತನ್ನ ಮಗುವಿನೊಂದಿಗೆ ಜಿಪ್‌ಲೈನ್ ಸವಾರಿ ಮಾಡಲು ಹೊರಟಿದ್ದರು ಮತ್ತು ಇದ್ದಕ್ಕಿದ್ದಂತೆ ಎಂದು ಬರೆದು ಅಶ್ಕರ್ ವೀಡಿಯೋ ಪೋಸ್ಟ್ ಮಾಡಿದ್ದ.
ಆತನ ಈ ಎಐ ವೀಡಿಯೋ ವೈರಲ್ ಆಗ್ತಿದ್ದಂತೆ ವಯನಾಡ್ ಸೈಬರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆಕ್ಟೋಬರ್ 30ರಂದೇ ಈ ಬಗ್ಗೆ ಎಫ್‌ಐಆರ್ ದಾಖಲಾಗಿತ್ತು. ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಎಐ ವೀಡಿಯೋ ಮಾಡಿ ಜನರಲ್ಲಿ ಭೀತಿ ಹುಟ್ಟಿಸಿದ ಆಶ್ಕರ್ ವಿರುದ್ಧ ಕೊಲೆಯತ್ನ ಪ್ರಕರಣ ಸೇರಿದಂತೆ ಈ ಹಿಂದೆಯೇ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ರೀತಿ ಸುಳ್ಳು ವೀಡಿಯೋ ಮಾಡಿ ಭೀತಿ ಹುಟ್ಟಿಸುವವರ ವಿರುದ್ಧ, ಜನರ ದಾರಿ ತಪ್ಪಿಸಿ ಸಮಾಜದ ನೆಮ್ಮದಿ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ನಿರ್ಮಾಣ ಹಂತದ ಮೇಲ್ಸೇತುವೆ ಮೇಲೆ ಕಾರು ಓಡಿಸಿದ ಚಾಲಕ: ಎರಡು ಕಂಬಗಳ ಮಧ್ಯೆ ತಲೆಕೆಳಗೆ ನೇತಾಡಿದ ಕಾರು
ಇದನ್ನೂ ಓದಿ: ವಿದೇಶೀ ನೆಲದಲ್ಲಿ ಸೀರೆಯುಟ್ಟು ಟ್ರೆಂಡ್ ಉಲ್ಟಾ ಮಾಡಿದ ಭಾರತೀಯ ನಾರಿ: ಸೆಲ್ಪಿಕೇಳಿದ ಫಾರಿನರ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ