ರೀಲ್ಸ್ ವೈರಲ್ ಆಗ್ಬೇಕು ಅಂತ ಸೈಕಲ್‌ನಲ್ಲಿ ಸಾಗ್ತಿದ್ದ ವೃದ್ಧನ ಮುಖಕ್ಕೆ ಯುವಕನೋರ್ವ ಪೋಮ್ ಸ್ಪ್ರೆ ಮಾಡಿದ್ದು, ಇದರಿಂದ ನಡುದಾರಿಯಲ್ಲಿ ವೃದ್ಧ ದಾರಿ ಕಾಣದೇ ಸಂಕಷ್ಟಕ್ಕೀಡಾಗಿದ್ದರು. ಆಮೇಲೇನಾಯ್ತು ಎಂಬುದಕ್ಕೆ ಈ ಸ್ಟೋರಿ ನೋಡಿ.
ಕೆಲವರಿಗೆ ಬೇರೆಯವರಿಗೆ ಕಿರುಕುಳ ನೀಡಿ ಮಜಾ ತೆಗೆದುಕೊಳ್ಳುವುದರಲ್ಲಿ ಅದೇನೋ ಖುಷಿ. ಇದಕ್ಕಾಗಿ ಕೆಲವರು ಯಾವ ಹಂತಕ್ಕೂ ತಲುಪುತ್ತಾರೆ. ಯಾವುದೋ ಅಮಾಯಕ ಜೀವಗಳ ಪ್ರಾಣಕ್ಕೆ ಎರವಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಬೈಕ್‌ನಲ್ಲಿ ಸಾಗುತ್ತಿದ್ದ ಯುವಕರಿಬ್ಬರು ಸೈಕಲ್‌ನಲ್ಲಿ ಸಾಗುತ್ತಿದ್ದ ವೃದ್ಧರೊಬ್ಬರ ಮುಖಕ್ಕೆ ಪೋಮ್ ಸ್ಪ್ರೆ ಹೊಡೆದಿದ್ದಾರೆ. ಇದರಿಂದ ದಾರಿ ಕಾಣದೇ ನಡುರಸ್ತೆಯಲ್ಲಿ ವೃದ್ಧ ವ್ಯಕ್ತಿ ಕಂಗಾಲಾಗಿದ್ದಾರೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಮಧ್ಯ ಪ್ರದೇಶ ಪೊಲೀಸರು ವೃದ್ಧನ ಮುಖಕ್ಕೆ ಪೋಮ್ ಸ್ಪ್ರೆ ಹೊಡೆದ ಯುವಕನನ್ನು ಕಂಬಿ ಹಿಂದೆ ಕೂರಿಸಿದ್ದು, ನಡೆಯಲು ಕಷ್ಟಪಡುವಂತೆ ಮಾಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ನಡುರಸ್ತೆಯಲ್ಲಿ ವೃದ್ಧನ ಮುಖಕ್ಕೆ ಸ್ಪ್ರೆ ಹೊಡೆಯುವ ಮೂಲಕ ಅವರ ಜೀವದೊಂದಿಗೆ ಚೆಲ್ಲಾಟವಾಡಿದ ಯುವಕನಿಗೆ ನಡೆಯಲು ಕಷ್ಟಪಡುವಂತೆ ಲಾಠಿ ರುಚಿ ತೋರಿಸಿದ ಪೊಲೀಸರ ಕೆಲಸಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಅಂದ ಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಝಾನ್ಸಿಯ ನವಬಾದ್ ಎಂಬಲ್ಲಿ ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕರಿಬ್ಬರು ವಾಹನ ದಟ್ಟಣೆಯ ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದು, ಹಿಂದೆ ಕುಳಿತ ಯುವಕ ಅದೇ ರಸ್ತೆಯಲ್ಲಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಮುಖಕ್ಕೆ ಪೋಮ್ ಸ್ಪ್ರೇ ಹೊಡೆದಿದ್ದಾನೆ. ಇದರಿಂದ ನಡುರಸ್ತೆಯಲ್ಲಿ ವೃದ್ಧ ದಾರಿ ಕಾಣದೇ ಪರದಾಡಿದ್ದಾರೆ. ಆದರೆ ವೃದ್ಧರಿಗೆ ಮುಂದೇನಾಯ್ತು ಎಂಬ ದೃಶ್ಯ ವೀಡಿಯೋದಲ್ಲಿಲ್ಲ. ಆದರೆ ಈ ಕಿಡಿಗೇಡಿ ಯುವಕರಿಗೆ ಪೊಲೀಸರು ಏನ್ ಮಾಡಿದ್ರು ಎಂಬ ದೃಶ್ಯ ಈ ವೀಡಿಯೋದಲ್ಲಿ ಸೆರೆ ಆಗಿದೆ.
ಹೀಗೆ ಅಮಾಯಕ ವೃದ್ಧನ ಮೇಲೆ ಕಿಡಿಗೇಡಿ ಬುದ್ಧಿ ತೋರಿದ ಯುವಕನನ್ನು ವಿನಯ್ ಯಾದವ್ ಎಂದು ಗುರುತಿಸಲಾಗಿದೆ. ಈತ ವೀಡಿಯೋ ವೈರಲ್ ಆಗುವುದಕ್ಕೋಸ್ಕರ ಈ ಕೃತ್ಯವೆಸಗಿದ್ದು, ತನಿಖೆ ವೇಳೆ ತಿಳಿದು ಬಂದಿದೆ. ಹೇಗಿದೆ ನೋಡಿ ಈ ಯುವಕನ ಸೋಶಿಯಲ್ ಮೀಡಿಯಾದ ರೀಲ್ಸ್ ಹುಚ್ಚು, ತನ್ನ ಬೇಳೆ ಬೇಯಿಸುವುದಕ್ಕೋಸ್ಕರ ಈತ ವೃದ್ಧನಿಗೆ ನಡುರಸ್ತೆಯಲ್ಲಿ ಈ ಕೃತ್ಯವೆಸಗುವ ಮೂಲಕ ವೃದ್ಧನ ಜೀವವನ್ನೇ ಬಲಿ ತೆಗೆದುಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ವೀಡಿಯೋ ವೈರಲ್ ಆದ ನಂತರ ಆತನನ್ನು ಬಂಧಿಸಿ ಕಂಬಿ ಹಿಂದೆ ಕಳಿಸಿದ ಪೊಲೀಸರು ನಡೆಯಲು ಕಷ್ಟಪಡುವಂತೆ ಲಾಠಿ ರುಚಿ ತೋರಿಸಿದ್ದಾರೆ. ವಿಪರ್ಯಾಸ ಎಂದರೆ ಆತ ಮಾಡಿದ ಕಿಡಿಗೇಡಿ ಕೆಲಸದ ದೃಶ್ಯದ ಜೊತೆ ಆತ ನಡೆಯಲು ಪರದಾಡುವ ದೃಶ್ಯವೂ ಜೊತೆಗೆ ವೈರಲ್ ಆಗ್ತಿದೆ. ಇದಕ್ಕೆ ಹೇಳೋದಲ್ವೆ ಕರ್ಮ ರಿಟರ್ನ್ಸ್ ಅಂತ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಯುವಕನ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಇಂತಹ ಪೋಲಿಗಳಿಗೆ ಇದಕ್ಕಿಂತ ಕಠಿಣ ಶಿಕ್ಷೆ ನೀಡಬೇಕು ಎಂದು ಜನ ಆಗ್ರಹಿಸಿದ್ದು, ಪೊಲೀಸರು ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.