
ಚೆನ್ನೈ: ನೀಟ್ ಅಕ್ರಮದ ವಿರುದ್ಧ ಹೋರಾಟದ ಬಳಿಕ ಎಸ್‌ಐಆರ್ ವಿವಾದ ಮುಂದಿಟ್ಟುಕೊಂಡು ಜೆನ್ ಝೀಗಳನ್ನು ಒಳಗೊಂಡ ಸಿಜೆಪಿ ದೇಶವ್ಯಾಪಿ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜೆನ್ ಝೀಗಳ ಗುಣಗಾನ ಮಾಡಿದ್ದಾರೆ. ‘ಜಗತ್ತಿನ ಸಮಸ್ಯೆಗಳಿಗೆ ಬೇಕಾಗಿರುವ ಪರಿಹಾರಗಳು ಜೆನ್ ಝೀಗಳ ಬಳಿ ಇದೆ. ಅವರು ಭವಿಷ್ಯವನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕಿದೆ’ ಎಂದು ಸಲಹೆ ನೀಡಿದ್ದಾರೆ.
ಭಾನುವಾರ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ತಮಿಳುನಾಡಿಗೆ ಆಗಮಿಸಿದ್ದ ಪ್ರಧಾನಿ ಮೋದಿ ನಂದಂಬಾಕಂನ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ನಡೆದ ಜೈಗೋಪಾಲ್ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ‘ಇಂದು ಜಗತ್ತು ಪರಿಹಾರಗಳನ್ನು ಹುಡುಕುತ್ತಿದೆ ಮತ್ತು ಆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಪ್ರತಿಯೊಬ್ಬ ಯುವಕನೂ ತನ್ನ ಭವಿಷ್ಯವನ್ನು ಅಷ್ಟೇ ವಿಶಾಲವಾದ ದೃಷ್ಟಿಕೋನದಿಂದ ನೋಡಬೇಕು. ಇದು ನಿಮ್ಮ ಸಮಯ, ನಿಮ್ಮ ಅವಕಾಶ. ಆದ್ದರಿಂದ ನಿರ್ಭೀತರಾಗಿರಿ ಮತ್ತು ನಿಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ. ದೊಡ್ಡದಾಗಿ ಕನಸು ಕಾಣಿ, ವಿಭಿನ್ನವಾಗಿ ಯೋಚಿಸಿ’ ಎಂದು ಮೋದಿ ಕರೆ ನೀಡಿದರು.
ಇದಕ್ಕೂ ಮೊದಲು ಪ್ರಧಾನಿ ಮೋದಿ, 13 ಸಾವಿರ ಕೋಟಿ ರು. ಮೌಲ್ಯದ ರೈಲ್ವೆ, ರಸ್ತೆ, ಪೆಟ್ರೋಲಿಯಂ ಯೋಜನೆಗಳಿಗೆ ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು. ಬಳಿಕ ಚೆನ್ನೈ ಮೆಟ್ರೋದ 2ನೇ ಹಂತವನ್ನು ಉದ್ಘಾಟಿಸಿದರು. ಈ ವೇಳೆ ಅವರು ಸಿಎಂ ವಿಜಯ್ ಅವರ ಕೈ ಹಿಡಿದುಕೊಂಡು ಒಟ್ಟಾಗಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.
ಬಳಿಕ ಮಾತನಾಡಿದ ಮೋದಿ, ‘ದೇಶದ ಅಭಿವೃದ್ಧಿಯನ್ನೇ ನಾನು ನನ್ನ ಮಂತ್ರವೆಂದು ಪರಿಗಣಿಸಿದ್ದೇನೆ. (ಗುಜರಾತ್) ಸಿಎಂ ಆಗಿದ್ದಾಗ ನನಗೆ ಜನರ ನಿರೀಕ್ಷೆಗಳು ಅರ್ಥವಾಗಿದ್ದವು. ಪ್ರಧಾನಿಯಾದ ಬಳಿಕ ಅವುಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ’ ಎಂದರು. ಮುಂದುವರಿದು, ‘ಜನಸೇವೆಯ ಉದ್ದೇಶವನ್ನಿಟ್ಟುಕೊಂಡು ವಿಜಯ್ ಅವರೊಂದಿಗೆ ಕೂಡಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ’ ಎಂಬ ಭರವಸೆ ನೀಡಿದರು.
ಬಳಿಕ ಮೋದಿಯವರು ವಿಜಯ್ ಜತೆ ಪೋರೂರ್ ಬೈಪಾಸ್‌ನಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ವಾಪಸ್ ಮೆಟ್ರೋದಲ್ಲಿ ಪ್ರಯಾಣಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ