ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳ ಸಮರ: CEC ವಿರುದ್ಧ ಸುಪ್ರೀಂಕೋರ್ಟ್‌ CJಗೆ ದೂರು

Published : Oct 12, 2026, 05:43 AM IST
Rahul gandhi

ಸಾರಾಂಶ

ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಮತಗಳವು ಆರೋಪದಡಿ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ, ಇಂಡಿಯಾ ಗೇಟ್‌ನಿಂದ ಸುಪ್ರೀಂಕೋರ್ಟ್‌ವರೆಗೆ ಪಾದಯಾತ್ರೆ ನಡೆಸಲಿದ್ದಾರೆ.

ನವದೆಹಲಿ: ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಕ್ರೋಚ್‌ ಜನತಾ ಪಕ್ಷ (ಸಿಜೆಪಿ) ದೇಶವ್ಯಾಪಿ ಬೃಹತ್ ಪ್ರತಿಭಟನೆ ಆರಂಭಿಸಿರುವ ಬೆನ್ನಲ್ಲೇ, ಇದೀಗ ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಕೂಡ ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ‘ಇಂಡಿಯಾ’ ಮೈತ್ರಿಕೂಟದ ನಾಯಕರು ಸೋಮವಾರ ಸಂಜೆ 4 ಗಂಟೆ ವೇಳೆಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಭೇಟಿ ಮಾಡಿ ಚುನಾವಣಾ ಆಯೋಗ, ಸಿಇಸಿ ಜ್ಞಾನೇಶ್‌ ಕುಮಾರ್‌ ಮತ್ತು ಎಸ್‌ಐಆರ್‌ ಬಗ್ಗೆ ದೂರು ನೀಡಲು ನಿರ್ಧರಿಸಿದ್ದಾರೆ.

ದೆಹಲಿಯ ಇಂಡಿಯಾ ಗೇಟ್‌ನಿಂದ ಸುಪ್ರೀಂಕೋರ್ಟ್‌ವರೆಗೆ ಬೃಹತ್‌ ಪಾದಯಾತ್ರೆ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಹೋರಾಟದ ವೇಳೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವ ಸಂಪುಟ ಸದಸ್ಯರು, ಎಲ್ಲಾ ಕಾಂಗ್ರೆಸ್‌ ಶಾಸಕರು, ಸಂಸದರು ಸೇರಿ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ. ಅದೇ ರೀತಿ ಕಾಂಗ್ರೆಸ್ ಆಡಳಿತದ ರಾಜ್ಯಗಳ ಶಾಸಕರು, ಸಚಿವರು, ಇತರೆ ರಾಜ್ಯಗಳ ಕಾಂಗ್ರೆಸ್‌ ನಾಯಕರು ಕೂಡಾ ಭಾಗಿಯಾಗುವ ನಿರೀಕ್ಷೆ ಇದೆ.

ಈ ಪ್ರತಿಭಟನೆಯನ್ನು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಯುತ್ತಿರುವ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದಿರುವ ಕಾಂಗ್ರೆಸ್‌ ಪಕ್ಷ, ‘ಇಂಡಿಯಾ ಒಕ್ಕೂಟ ಹಾಗೂ ದೇಶದ ಯುವಕರು ದೆಹಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ತಮ್ಮ ವಿರೋಧ ದಾಖಲಿಸಲಿದ್ದಾರೆ. ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಲಿದ್ದಾರೆ’ ಎಂದು ಹೇಳಿಕೊಂಡಿದೆ.

ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ನೇತೃತ್ವದ ನಿಯೋಗವೊಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಭೇಟಿಯಾಗಿ ಮತಗಳವು ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಲಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ದೇಶಾದ್ಯಂತ ಗಟ್ಟಿ ಧ್ವನಿ:

ಮತಗಳವು ವಿರೋಧಿಸಿ ಇಂಡಿಯಾ ಒಕ್ಕೂಟ, ದೇಶದ ಯುವಕರು ಮತ್ತೊಮ್ಮೆ ಬೀದಿಗಿಳಿಯಲಿದ್ದು, ಈ ಬಾರಿ ಮತಗಳವು ವಿರುದ್ಧದ ನಮ್ಮ ದನಿ ದೇಶಾದ್ಯಂತ ಹೆಚ್ಚು ಗಟ್ಟಿಯಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ಮೊಳಗಲಿದೆ ಎಂದು ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರೆ.

ಪ್ರತಿಭಟನೆ ವೇಳೆ ನಾವು ಸಿಜೆಐ ಅವರನ್ನೂ ಭೇಟಿಯಾಗಲಿದ್ದು, ಸಂವಿಧಾನವನ್ನು ದಿಲ್ಲಿಯ ಬೀದಿಯಲ್ಲಿ ಚೂರು ಚೂರು ಮಾಡುತ್ತಿರುವಾಗ, ಪ್ರಜಾಪ್ರಭುತ್ವದ ಧಮನಕ್ಕೆ ಯತ್ನಿಸುತ್ತಿರುವಾಗ ಕಾನೂನಿನ ರಕ್ಷಕರು ಕಣ್ಣಿಗೆ ಬಟ್ಟೆಕಟ್ಟಿ ಕೂರಬಾರದು ಎಂದು ಅವರಲ್ಲಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಭೇಟಿ ನಿರಾಕರಣೆಗೆ ಕಾರಣ?

ವೋಟ್ ಚೋರಿ ಆರೋಪಗಳ ಕುರಿತು ಮನವಿ ಸಲ್ಲಿಸಲು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಕೋರಿದ್ದ ಭೇಟಿಯನ್ನು ನಿರಾಕರಿಸಿರುವ ಮು.ನ್ಯಾ. ಸೂರ್ಯಕಾಂತ್, ‘ಇದೇ ರೀತಿಯ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ವಿಚಾರಣೆಯಲ್ಲಿವೆ. ಹೀಗಾಗಿ ಆಡಳಿತಾತ್ಮಕ ಹಂತದಲ್ಲಿ ಕೋರ್ಟ್ ಯಾವುದೇ ಆದೇಶಗಳನ್ನು ಹೊರಡಿಸಲು ಸಾಧ್ಯವಿಲ್ಲ’ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ. ‘ಆದರೆ ಯಾವುದೇ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ ಅವರ ರಕ್ಷಣೆಗೆ ಸುಪ್ರೀಂ ಕೋರ್ಟ್ 24x7 ಗಂಟೆಯೂ ಮುಕ್ತವಾಗಿರುತ್ತದೆ. ಆದ್ದರಿಂದ ಈ ವಿಷಯದ ಕುರಿತು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಅರ್ಜಿಯನ್ನು ಸಲ್ಲಿಸಿ. ಆ ಅರ್ಜಿಯನ್ನು ಮಂಗಳವಾರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಲ್ಲಿಯಲ್ಲಿ 2ನೇ ದಿನವೂ ಜಿರಳೆ ಗದ್ದಲ; 1 ವರ್ಷ ಧರಣಿ ಮಾಡಲ್ಲ, ಷರತ್ತಿನಡಿ ಬಿಡುಗಡೆ
India Latest News Live: ಚುನಾವಣೆ ಗೆಲ್ಲಲು ಡೊನಾಲ್ಡ್ ಟ್ರಂಪ್‌ ಮಾಡಿದ ರಹಸ್ಯ ತೈಲ ಒಪ್ಪಂದ? ರಷ್ಯಾ-ಉಕ್ರೇನ್ ಸಂಧಾನ