20 ವರ್ಷದ ಯುವತಿಯೊಬ್ಬಳ ಜೊತೆ ಕರ್ತವ್ಯ ನಿರತನಲ್ಲದ ಪೈಲಟ್‌ವೊಬ್ಬರು ಅಸಭ್ಯವಾಗಿ ವರ್ತಿಸಿದ್ದು, ಅದಕ್ಕೆ ವಿಮಾನ ಸಿಬ್ಬಂದಿಯೂ ಸಹ ಕೈಜೋಡಿಸಿದ ಆರೋಪ ಕೇಳಿ ಬಂದಿದೆ.
ಬೆಂಗಳೂರು: 20 ವರ್ಷದ ಯುವತಿಯೊಬ್ಬಳ ಜೊತೆ ಕರ್ತವ್ಯ ನಿರತನಲ್ಲದ ಪೈಲಟ್‌ವೊಬ್ಬರು ಅಸಭ್ಯವಾಗಿ ವರ್ತಿಸಿದ್ದು, ಅದಕ್ಕೆ ವಿಮಾನ ಸಿಬ್ಬಂದಿಯೂ ಸಹ ಕೈಜೋಡಿಸಿದ ಆರೋಪ ಕೇಳಿ ಬಂದಿದೆ. ಘಟನೆ ಅ.1ರಂದು ಬೆಂಗಳೂರಿನಿಂದ ಪುಣೆಗೆ ಹೊರಟಿದ್ದ ಆಕಾಸ ಏರ್‌ಲೈನ್‌ಗೆ ಸೇರಿದ್ದ ವಿಮಾನದಲ್ಲಿ ನಡೆದಿದೆ.
ಈ ಕುರಿತು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿರುವ ಯುವತಿ, ತನ್ನನ್ನು ಬಲವಂತವಾಗಿ ವಿಮಾನದ ಕಡೆಯ ಸೀಟ್‌ಗೆ ಲಗೇಜ್ ಸಮೇತ ಕರೆದುಕೊಂಡು ಹೋಗಿ ಆಲ್ಕೋಹಾಲ್ ನೀಡಲಾಯಿತು. ತಾನು ನಿರಾಕರಿಸಿದರೂ ಒಪ್ಪದ ಪೈಲಟ್, ಬಲವಂತ ಮಾಡಿದರು ಹಾಗೂ ವಿಮಾನ ಸಿಬ್ಬಂದಿ ಸಹ ನನ್ನ ನೆರವಿಗೆ ಬರಲಿಲ್ಲ. ಇವರ ದುರ್ವರ್ತನೆ ವಿಮಾನದಿಂದ ಇಳಿದ ನಂತರವೂ ಮುಂದುವರೆದಿದ್ದು, ನನ್ನ ಮೊಬೈಲ್ ನಂಬರ್ ನೀಡುವಂತೆಯೂ ಒತ್ತಾಯಪಡಿಸಲಾಯಿತು. ಬಳಿಕ ಆಕಾಸ ಏರ್‌ಲೈನ್ಸ್ ಜಾಲತಾಣದಲ್ಲಿ ದೂರು ಹಾಕಿದರೂ ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಕಾಶ ಏರ್‌ಲೈನ್ಸ್ ಸಿಬ್ಬಂದಿ, ಅವರ ಸಾಮಾಜಿಕ ಜಾಲತಾಣ ಖಾಸಗಿ ಅಕೌಂಟ್ ಆಗಿರುವುದರಿಂದ ಅವರನ್ನು ಸಂಪರ್ಕಿಸಲು ಕಷ್ಟವಾಯಿತು. ಅವರ ಮೊಬೈಲ್‌ಗೆ ಕರೆ ಮಾಡಿದರೂ ಅವರು ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದೆ.