
ಭೋಪಾಲ್: ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಬಲ್ಪುರ ನಗರದ ಏರ್ಪೋಟ್ ರಸ್ತೆಯಲ್ಲಿರುವ IIITDM (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನೊಲಾಜಿ ಡಿಸೈನ್ ಎಂಡ್ ಮ್ಯಾನುಫೆಕ್ಚರಿಂಗ್) ಕಾಲೇಜಿನ ಎಂಎಂಎಸ್ ವಿಡಿಯೋ ಪ್ರಕರಣ ಇಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರನ್ನು ಆತಂಕಕ್ಕೆ ತಳ್ಳಿದೆ. ಈ ಕಾಲೇಜಿನ ವಿದ್ಯಾರ್ಥಿನಿಯಾಗಿರೋ ಒಬ್ಬಳು ಕಳೆದ 2 ವರ್ಷಗಳಿಂದ ತನ್ನೊಂದಿಗೆ ಓದುತ್ತಿರುವ ವಿದ್ಯಾರ್ಥಿನಿಯರ ಖಾಸಗಿ/ನಗ್ನ ವಿಡಿಯೋಗಳನ್ನು ಸೆರೆ ಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದಳು. ಇದೀಗ ವಿದ್ಯಾರ್ಥಿನಿಯರು ನೀಚ ಕೆಲಸ ಮಾಡಿದ ಯುವತಿಯನ್ನು ಹಿಡಿದು ಕಾಲೇಜು ಅಡಳಿತ ಮಂಡಳಿಗೆ ನೀಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿದ ವಿದ್ಯಾರ್ಥಿಗಳು ದುಮ್ನಾ ಚೌಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಆರೋಪಿ ಯುವತಿ ಸಹ IIITDM ಕಾಲೇಜಿನ ವಿದ್ಯಾರ್ಥಿನಿ. ಕಳೆದ ಎರಡು ವರ್ಷಗಳಿಂದ ಕಾಲೇಜಿನಲ್ಲಿ ಎಂಎಂಎಸ್ ಹಗರಣ ನಡೆಯುತ್ತಿದೆ. ಇಲ್ಲಿ BTECH, CSC ಸೆಕೆಂಡ್ ಇಯರ್ ವಿದ್ಯಾರ್ಥಿನಿ ಕಳೆದ ಎರಡು ವರ್ಷಗಳಿಂದ ದೆಹಲಿಯ ಪ್ರಿಯಕರಿಗೆ ನಗ್ನ ವಿಡಿಯೋಗಳನ್ನು ಕಳುಹಿಸುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಇಂದು ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ವಿದ್ಯಾರ್ಥಿನಿ ಸ್ನಾನ ಮಾಡುತ್ತಿರುವಾಗ ಮೇಲ್ಭಾಗದಲ್ಲಿ ಕೈ ಕಾಣಿಸಿತು. ಕೂಡಲೇ ಹೊರಗೆ ಬಂದಾಗ ಆಕೆ ಸಿಕ್ಕಿದ್ದಾಳೆ. ಆಕೆಯ ಕೈಯಲ್ಲಿ ಡಿವೈಸ್ ಸಹ ಪತ್ತೆಯಾಗಿದೆ. ಈ ಡಿವೈಸ್ ಮೂಲಕ ನಮ್ಮ ಸ್ನಾನದ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದಳು. ಕೂಡಲೇ ಆಕೆಯನ್ನು ಹಿಡಿದು ಎಲ್ಲಾ ವಿದ್ಯಾರ್ಥಿನಿಯರನ್ನು ಕರೆದಿದ್ದಾಳೆ. ಆರೋಪಿ ಯುವತಿಯನ್ನು ಹಿಡಿದು ಕಾಲೇಜು ಆಡಳಿತ ಮಂಡಳಿಯ ಸದಸ್ಯರ ವಶಕ್ಕೆ ನೀಡಲಾಗಿದೆ. ಆಕೆಯ ಬಳಿಯಲ್ಲಿದ್ದ ಡಿವೈಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇತ್ತ ಪೊಲೀಸರು ಆಗಮಿಸಿ ವಿದ್ಯಾರ್ಥಿನಿ ಮತ್ತು ವಿಡಿಯೋ ರೆಕಾರ್ಡ್ ಮಾಡ್ತಿದ್ದ ಡಿವೈಸ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: ಮದ್ವೆ ಮನೆಯನ್ನು ಮಸಣವಾಗಿಸಿದ ತಂದೂರಿ ರೊಟ್ಟಿ: ಇಬ್ಬರು ಹುಡುಗರ ಕೊಲೆ
ಕಾಲೇಜಿನಲ್ಲಿ 400 ವಿದ್ಯಾರ್ಥಿಗಳು
ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಲೇಜಿನ ಸುಮಾರು 150ಕ್ಕೂ ವಿದ್ಯಾರ್ಥಿನಿಯರು ದುಮ್ನಾ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ಹೊರಹಾಕಿದರು. ಇಲ್ಲಿಯ ವಿದ್ಯಾರ್ಥಿನಿಯರ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿ ದೆಹಲಿಯಲ್ಲಿರುವ ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದಳು ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.
ಈ ನಡುವೆ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಅಪ್ಲೋಡ್ ಮಾಡಲಾಗಿರುವ ಆತಂಕದ ಸುದ್ದಿಯೂ ಹೊರ ಬಂದಿದೆ. ಈ ವಿಡಿಯೋಗಳನ್ನು ಕೆಟ್ಟ ಕೆಲಸಗಳಿಗಾಗಿ ಬಳಕೆ ಮಾಡಿರುವ ಆರೋಪವನ್ನು ವಿದ್ಯಾರ್ಥಿನಿಯರು ಮಾಡುತ್ತಿದ್ದಾರೆ. ಇಲ್ಲಿ ಎಫ್‌ಐಆರ್ ದಾಖಲಾಗಿಲ್ಲ, ಆದರೆ ಖಮರಿಯಾ ಪೊಲೀಸ್ ಠಾಣೆಯಲ್ಲಿ ದಾಖಲಾಗಲಿದೆ ಎಂದು ದುಮ್ನಾ ಚೌಕಿ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ. ಪೊಲೀಸರು ಆರೋಪಿ ವಿದ್ಯಾರ್ಥಿನಿಯ ಹೆಸರು ಮತ್ತು ಆಕೆಯ ಮಾಹಿತಿಯನ್ನು ಒದಗಿಸಿಲ್ಲ.
ರಾಜ್ಯದ ಕರಾವಳಿ ಭಾಗದಲ್ಲಿಯೂ ಪ್ರಕರಣ
ರಾಜ್ಯದ ಕರಾವಳಿ ಭಾಗದಲ್ಲಿಯೂ ಇಂತಹವುದೇ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಸೆರೆ ಹಿಡಿಯಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸುದ್ದಿ ರಾಜ್ಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಬೆಂಗಳೂರಿನ ಜಯದೇವ ಆಸ್ಪತ್ರೆಯ ಶೌಚಾಲಯದಲ್ಲಿ ಕ್ಯಾಮೆರಾ ಇರಿಸಿದ್ದ ವಾರ್ಡ್ ಬಾಯ್‌ನನ್ನು ಬಂಧಿಸಲಾಗಿತ್ತು. ಆರೋಪಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದರು. ಶೌಚಾಲಯಕ್ಕೆ ಬಂದಿದ್ದ 35 ವರ್ಷದ ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ