ಪಂಜಾಬ್‌ನ ಮೊಹಾಲಿಯಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವಿಜ್ಞಾನಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೊಹಾಲಿ : ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಐಐಇಎಸ್‌ಆರ್‌ನಲ್ಲಿ(ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ)ಕೆಲಸ ಮಾಡುತ್ತಿದ್ದ ವಿಜ್ಞಾನಿಯೊಬ್ಬರು ಸಾವನ್ನಪ್ಪಿದ ಆಘಾತಕಾರಿ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ. ಡಾ. ಸ್ವರ್ಣಕರ್ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ನಡೆದ ಹಿಂಸಾತ್ಮಕ ಗಲಾಟೆಯಲ್ಲಿ ಹತ್ಯೆಯಾದ ವಿಜ್ಞಾನಿ. ಇವರು ತಮ್ಮ ಪೋಷಕರ ಜೊತೆ ಪಂಜಾಬ್‌ನ ಮೊಹಾಲಿಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು. ಮೊಹಾಲಿ ಸೆಕ್ಟರ್ 67 ರಲ್ಲಿ ಇವರ ಬಾಡಿಗೆ ಮನೆ ಇತ್ತು. ಮಾರ್ಚ್ 11ರ ರಾತ್ರಿ ಮಂಗಳವಾರ ಡಾ. ಅಭಿಷೇಕ್ ಸ್ವರ್ಣಕರ್ ಅವರು ನೆರೆಮನೆಯವರಾದ ಮಾಂಟಿ ಅವರೊಂದಿಗೆ ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ ನಡೆಸಿದ್ದರು ಈ ವೇಳೆ ನೆರೆಮನೆಯವ ಮಾಂಟಿ ಅವರನ್ನು ನೆಲಕ್ಕೆ ತಳ್ಳಿ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೆಲ ದಿನಗಳ ಹಿಂದಷ್ಟೇ ಕಿಡ್ನಿ ಕಸಿಗೆ ಒಳಗಾಗಿದ್ದ ಅಭಿಷೇಕ್
ಮೂಲತಃ ಜಾರ್ಖಂಡ್‌ನ ಧನ್ಬಾದ್‌ನವರಾದ ಡಾ. ಅಭಿಷೇಕ್ ಸ್ವರ್ಣಕರ್ ಅವರು ಒಬ್ಬ ವಿಶಿಷ್ಟ ವಿಜ್ಞಾನಿಯಾಗಿದ್ದು, ಅವರ ಸಂಶೋಧನ ಕೆಲಸದ ಬಗ್ಗೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ವರದಿ ಆಗಿತ್ತು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದರು ಮತ್ತು IISER ನಲ್ಲಿ ಯೋಜನಾ ವಿಜ್ಞಾನಿಯಾಗಿ ಸೇರಿಕೊಂಡಿದ್ದರು. ಅಲ್ಲದೇ ಸ್ವಲ್ಪ ಅನಾರೋಗ್ಯ ಸಮಸ್ಯೆ ಇದ್ದ ವಿಜ್ಞಾನಿ ಅಭಿಷೇಕ್ ಅವರು ಇತ್ತೀಚೆಗೆ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಸ್ವಂತ ಸಹೋದರಿಯೇ ಅಭಿಷೇಕ್ ಅವರಿಗೆ ತಮ್ಮ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡಿದ್ದರು. ಹೀಗಾಗಿ ಅವರು ಡಯಾಲಿಸಿಸ್‌ನಲ್ಲಿದ್ದರು. ಆದರೆ ಮೊನ್ನೆ ನಡೆದ ಹಲ್ಲೆಯ ನಂತರ ಅಸ್ವಸ್ಥರಾದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಅವರು ಆಸ್ಪತ್ರೆಯಲ್ಲಿ ನಿಧನರಾದರು.
ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್
ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದೆ. ಅದರಲ್ಲಿ ಕಾಣುವಂತೆ ಮಾಂಟಿ ಸೇರಿದಂತೆ ಕೆಲ ಸ್ಥಳೀಯರು ಅಭಿಷೇಕ್ ಅವರ ಬೈಕ್ ಬಳಿ ನಿಂತಿರುವುದನ್ನು ಕಾಣಬಹುದಾಗಿದೆ. ನಂತರ ಅಭಿಷೇಕ್ ತಮ್ಮ ಬೈಕ್ ಬಳಿ ಹೋಗಿ ಆ ಜಾಗದಿಂದ ಅದನ್ನು ಬೇರೆಡೆ ತರಲು ಪ್ರಯತ್ನಿಸುತ್ತಾರೆ. ಈ ವೇಳೆ ಜಗಳ ನಡೆದು ಮಾಂಟಿ, ಡಾ.ಅಭಿಷೇಕ್ ಅವರನ್ನು ನೆಲಕ್ಕೆ ತಳ್ಳಿ ಹೊಡೆಯಲು ಪ್ರಾರಂಭಿಸುತ್ತಾನೆ. ಈ ವೇಳೆ ಕುಟುಂಬದವರು ಮಧ್ಯಪ್ರವೇಶಿಸಿ ಮಾಂಟಿಯನ್ನು ಎಳೆದುಕೊಂಡು ಹೋಗುತ್ತಾರೆ. ಇತ್ತ ಬೇರೆ ನೆರೆಮನೆಯವರು ಬರುವ ವೇಳೆ ವಿಜ್ಞಾನಿ ಅಭಿಷೇಕ್ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿಯ ಕುಟುಂಬ ಒತ್ತಾಯಿಸಿದೆ. ಕೊಲೆಗೆ ಸಮಾನವಲ್ಲದ ಉದ್ದೇಶಪೂರ್ವಕವಲ್ಲದ ಹತ್ಯೆ ಪ್ರಕರಣವನ್ನು ದಾಖಲಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜ್ಞಾನಿಯ ದುರಂತ ಸಾವು ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ಗಲಾಟೆಗಳು ಹೇಗೆ ಹಿಂಸಾತ್ಮಕವಾಗುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೂ ಮೊದಲು, ದೆಹಲಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ಸ್ಥಳಕ್ಕಾಗಿ ನೆರೆಹೊರೆಯವರು ಜಗಳವಾಡುತ್ತಿರುವ ವೀಡಿಯೊಗಳು ವೈರಲ್ ಆಗಿದ್ದವು.